ನವದೆಹೆಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಇಂದು (ಮಂಗಳವಾರ) ಲೋಕಸಭೆಯಲ್ಲಿ ಮಂಡಿಸಿದೆ.
ಪ್ರಸ್ತಾವಿತ ಹೊಸ ಮಸೂದೆಯನ್ನು ‘ನಾರಿ ಶಕ್ತಿ ವಂದನಾ ಅಧಿನಿಯಮ’ ಎಂದು ಕರೆಯಲಾಗಿದೆ. ಹೊಸ ಸಂಸತ್ ಕಟ್ಟಡದಲ್ಲಿ ಸದನದ ಮೊದಲ ಕಲಾಪವನ್ನು ವೀಕ್ಷಿಸಲು ಬಾಲಿವುಡ್ ನಟಿಯರಾದ ಕಂಗನಾ ರನೌತ್, ಇಶಾ ಗುಪ್ತಾ ಸೇರಿದಂತೆ ಹಲವು ಗಣ್ಯರಿಗೆ ವಿಶೇಷ ಆಹ್ವಾನ ನೀಡಲಾಗಿತ್ತು.
ಕಲಾಪ ವೀಕ್ಷಣೆಗೆ ತೆರಳುವ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂದು ರಾಷ್ಟ್ರ ಮತ್ತು ರಾಷ್ಟ್ರದ ಮಹಿಳೆಯರಿಗೆ ಐತಿಹಾಸಿಕ ದಿನವಾಗಿದೆ. ಇಂದು ಹೊಸ ಸಂಸತ್ತಿನ ಮೊದಲ ಅಧಿವೇಶನವಾಗಿದ್ದು, ಇಡೀ ಅಧಿವೇಶನವು ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಉನ್ನತಿಗೆ ಮೀಸಲಾಗಿದೆ. ಇದರ ಶ್ರೇಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು. ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಮಹಿಳಾ ಸಬಲೀಕರಣಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಸೇನೆ ಮತ್ತು ವಾಯುಪಡೆಯಲ್ಲಿ ಮಹಿಳೆಯರು ಸೇವೆ ಸಲ್ಲಿಸುತ್ತಿರುವುದನ್ನು ನಾವು ನೋಡುತ್ತೇವೆ. ವಾಸ್ತವವಾಗಿ ನನ್ನ ಮುಂದಿನ ಚಿತ್ರ ‘ತೇಜಸ್’ನಲ್ಲಿ ನಾನು ವಾಯುಪಡೆಯ ಪೈಲಟ್ ಆಗಿಯೂ ನಟಿಸುತ್ತಿದ್ದೇನೆ. ಹಾಗಾಗಿ ಇಂದೊಂದು ನವ ಯುಗ ಎಂದೇ ನಾನು ಭಾವಿಸುತ್ತೇನೆ’ ಎಂದಿದ್ದಾರೆ.
ಪುರುಷ ಪ್ರಧಾನವಾದ ರಾಜಕೀಯ ರಂಗದಲ್ಲಿ ಮಹಿಳೆಯರು ತೊಡಗಿಸಿಕೊಳ್ಳುವುದು ಬಹಳ ಕಷ್ಟ. ರಾಜಕೀಯ ಎಂಬುದು ಸಂಪೂರ್ಣವಾಗಿ ನೆಟ್‌ವರ್ಕಿಂಗ್ ಆಧಾರಿತವಾಗಿರುತ್ತದೆ. ಮಹಿಳೆಯರು ಹೆಚ್ಚು ಹಿಂಸೆ, ಕಿರುಕುಳಕ್ಕೆ ಒಳಗಾಗುತ್ತಾರೆ. ಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯದಂತಹ ವೃತ್ತಿಗಳಲ್ಲಿ ಮಹಿಳೆಯರಿಗೆ ಖಂಡಿತವಾಗಿಯೂ ಮೀಸಲಾತಿ ಅತ್ಯಗತ್ಯ ಎಂದು ಕಂಗನಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.