ADVERTISEMENT

‘ಎಮರ್ಜೆನ್ಸಿ’ ಸಿನಿಮಾ: ತುರ್ತು ಪರಿಹಾರಕ್ಕೆ ಬಾಂಬೆ ಹೈಕೋರ್ಟ್‌ ನಕಾರ

ಪಿಟಿಐ
Published 4 ಸೆಪ್ಟೆಂಬರ್ 2024, 9:11 IST
Last Updated 4 ಸೆಪ್ಟೆಂಬರ್ 2024, 9:11 IST
<div class="paragraphs"><p>‘ಎಮರ್ಜೆನ್ಸಿ’ ಚಿತ್ರದಲ್ಲಿ&nbsp;ಕಂಗನಾ ರನೌತ್‌</p></div>

‘ಎಮರ್ಜೆನ್ಸಿ’ ಚಿತ್ರದಲ್ಲಿ ಕಂಗನಾ ರನೌತ್‌

   

ಮುಂಬೈ: ಸಂಸದೆ ಹಾಗೂ ನಟಿ ಕಂಗನಾ ರನೌತ್‌ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಎಮರ್ಜೆನ್ಸಿ’ ಸಿನಿಮಾಗೆ, ತುರ್ತಾಗಿ ಪ್ರಮಾಣಪತ್ರ ವಿತರಿಸುವಂತೆ ಸೆನ್ಸಾರ್‌ ಮಂಡಳಿಗೆ ನಿರ್ದೇಶನ ನೀಡಲು ಬಾಂಬೆ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ.

ಇದೇ 6ರಂದು ಈ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಹೈಕೋರ್ಟ್ ನಿರಾಕರಣೆಯಿಂದ, ಬಿಡುಗಡೆ ಇನ್ನಷ್ಟು ವಿಳಂಬವಾಗಲಿದೆ.

ADVERTISEMENT

ನ್ಯಾಯಮೂರ್ತಿಗಳಾದ ಬಿ.ಪಿ. ಕೊಲಾಬಾವಾಲಾ ಮತ್ತು ಫಿರ್ದೋಷ್ ಪೂನಿವಾಲಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ‘ಚಲನಚಿತ್ರವನ್ನು ಪ್ರಮಾಣೀಕರಿಸುವ ಮುನ್ನ ಸೆನ್ಸಾರ್‌ ಮಂಡಳಿಯು ಸಲ್ಲಿಕೆಯಾಗಿರುವ ಆಕ್ಷೇಪಣೆಗಳನ್ನು ಪರಿಶೀಲಿಸಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್‌ ನಿರ್ದೇಶನ ನೀಡಿದೆ. ಹೀಗಿರುವಾಗ, ಈ ಹಂತದಲ್ಲಿ ಯಾವುದೇ ತುರ್ತು ಪರಿಹಾರ ನೀಡಲು ಸಾಧ್ಯವಲ್ಲ’ ಎಂದು ಹೇಳಿತು.

‘ಮಧ್ಯ ಪ್ರದೇಶ ಹೈಕೋರ್ಟ್‌ನ ನಿರ್ದೇಶನ ಇರದಿದ್ದರೆ, ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಪ್ರಮಾಣಪತ್ರ ನೀಡುವಂತೆ ಇಂದೇ ಸೂಚಿಸಬಹುದಿತ್ತು’ ಎಂದ ಪೀಠವು ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಿತು.

ಈ ಸಿನಿಮಾ ಬಿಡುಗಡೆಗೆ ಶಿರೋಮಣಿ ಅಕಾಲಿದಳ ಸೇರಿದಂತೆ ಸಿಖ್‌ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಇದು ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸುತ್ತದೆ ಮತ್ತು ಐತಿಹಾಸಿಕ ಸಂಗತಿಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಆರೋಪಿಸಿದೆ.

‘ಎಮರ್ಜೆನ್ಸಿ’ ಸಿನಿಮಾಕ್ಕೆ ಅನುಮತಿ ನೀಡಲು ಸಿಬಿಎಫ್‌ಸಿಗೆ ನಿರ್ದೇಶನ ನೀಡುವಂತೆ ಕೋರಿ ಚಿತ್ರ ನಿರ್ಮಾಪಕ ಝೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌, ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.