ನವದೆಹಲಿ: ಕಮ್ಯುನಿಸ್ಟ್ ಪಕ್ಷದ (ಸಿಪಿಐ) ನಾಯಕ ಕನ್ಹಯ್ಯ ಕುಮಾರ್ ಮತ್ತು ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ (ಆರ್‌ಡಿಎಎಂ) ಶಾಸಕ ಜಿಗ್ನೇಶ್ ಮೇವಾನಿ ಅವರು ಸೆಪ್ಟೆಂಬರ್ 28 ರಂದು ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಮೂಲಗಳ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ಶನಿವಾರ ವರದಿ ಮಾಡಿದೆ.
ಈ ಇಬ್ಬರೂ ನಾಯಕರು ಅ.2ರ ಗಾಂಧೀ ಜಯಂತಿಯಂದು ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು. ಆದರೆ, ಸೆ.28ರ ಭಗತ್ ಸಿಂಗ್ ಅವರ ಜನ್ಮ ದಿನಾಚರಣೆಯಂದೇ ಸೇರ್ಪಡೆ ಕಾರ್ಯಕ್ರಮ ಮರು ನಿಗದಿಯಾಗಿದೆ.
ದಲಿತ ನಾಯಕರಾಗಿರುವ, ಜಿಗ್ನೇಶ್ ಮೇವಾನಿ ಸದ್ಯ ಗುಜರಾತ್‌ನ ವಡ್ಗಾಮ್ ಕ್ಷೇತ್ರದ ಶಾಸಕರೂ ಹೌದು. ಇನ್ನು ಸಿಪಿಐ ನಾಯಕರಾಗಿರುವ ಕನ್ಹಯ್ಯ ಕುಮಾರ್ ಕಳೆದ ಬಾರಿ ಬಿಹಾರದ ಬೆಗುಸರಾಯ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ, ಸೋತಿದ್ದರು. ಬಿಹಾರದಲ್ಲಿ ಕಳೆಗುಂದಿರುವ ಕಾಂಗ್ರೆಸ್‌ಗೆ ಚೈತನ್ಯ ನೀಡಲು ಕನ್ಹಯ್ಯ ಕುಮಾರ್ ಅವರ ಸೇರ್ಪಡೆಯು ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.