ಚೆನ್ನೈ: ‘ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಕಳಪೆ ಸಾಧನೆಯ ವರದಿಯನ್ನೇ ಲೇವಡಿ ಮಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಹೇಳಿಕೆ ಖಂಡನೀಯ’ ಎಂದು ಡಿಎಂಕೆ ಸಂಸದೆ ಕನಿಮೋಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಕ್ರೊ ಬ್ಲಾಗಿಂಗ್ ವೇದಿಕೆ ಎಕ್ಸ್‌ನಲ್ಲಿ ಸ್ಮೃತಿ ಅವರ ಹೇಳಿಕೆಯ ವಿಡಿಯೊ ಸಹಿತ ಪ್ರತಿಕ್ರಿಯಿಸಿರುವ ಅವರು, ‘ದೇಶದಲ್ಲಿರುವ ಅಪೌಷ್ಟಿಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರದ ಸಾಮರ್ಥ್ಯದ ಕುರಿತೇ ಇಲ್ಲಿ ಪ್ರಶ್ನೆ ಎದ್ದಿದೆ. ಜಾಗತಿಕ ಹಸಿವಿನ ಸೂಚ್ಯಂಕವನ್ನೇ ಸರಿಯಾಗಿ ಗ್ರಹಿಸದೆ ಅದನ್ನು ಅಪಹಾಸ್ಯ ಮಾಡಿರುವ ಕೇಂದ್ರ ಮಂತ್ರಿಯ ನಡೆ ನಿಜಕ್ಕೂ ಆಘಾತಕಾರಿ’ ಎಂದಿದ್ದಾರೆ.
ಹೈದರಾಬಾದ್‌ನಲ್ಲಿ ನಡೆದ ಭಾರತೀಯ ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮಿಗಳ ಸಂಘದ ಸಮಾವೇಶದಲ್ಲಿ ಸ್ಮೃತಿ ಅವರು ಸೂಚ್ಯಂಕ ಕುರಿತು ಮಾತನಾಡಿದ್ದರು. ‘ಅಪೌಷ್ಟಿಕತೆ, ಅಸಮರ್ಪಕ ಆಹಾರ ಧಾನ್ಯಗಳ ವಿತರಣೆ, ಶಿಶು ಮರಣದಂತ ಅತಿ ಮುಖ್ಯವಾದ ವಿಷಯದಲ್ಲಿ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಸಾಮರ್ಥ್ಯದ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಭಾರತದ ಕಥೆಗಳನ್ನು ಸರಿಯಾಗಿ ಹೇಳದೆ ಅದನ್ನು ತಿರುಚುವ ಕೆಲಸವಾಗುತ್ತಿದೆ. ಬಹಳಷ್ಟು ಜನರು ಇದೊಂದು ಅಸಂಬದ್ಧ ಎಂದಿದ್ದಾರೆ. 140 ಕೋಟಿ ಜನರು ಇರುವ ದೇಶದ ಮೂರು ಸಾವಿರ ಜನರಿಗೆ ಕರೆ ಮಾಡಿ, ನೀವು ಹಸಿದಿದ್ದೀರಾ...? ಎಂದು ಕೇಳಲಾಗಿದೆ. ಈ ಸೂಚ್ಯಂಕ ಪ್ರಕಾರ ಭಾರತಕ್ಕಿಂತ ಪಾಕಿಸ್ತಾನ ಉತ್ತಮ ಸ್ಥಿತಿಯಲ್ಲಿದೆಯಂತೆ. ಇದನ್ನು ಊಹಿಸಲು ಸಾಧ್ಯವೇ?’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.