ನವದೆಹಲಿ: ಕಾರಿನಡಿ ಸಿಲುಕಿದ್ದ ಯುವತಿಯ ಮೃತದೇಹವನ್ನು ಎಳೆದೊಯ್ದ ಪ್ರಕರಣದ ಆರೋಪಿಗಳ ರಕ್ತದ ಮಾದರಿ ಪರೀಕ್ಷೆ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಸಲ್ಲಿಸಿದೆ. ಅಪಘಾತದ ಸಂದರ್ಭದಲ್ಲಿ ಆರೋಪಿಗಳು ಮದ್ಯಪಾನ ಸೇವಿಸಿದ್ದರೇ ಎಂಬುದನ್ನು ಪತ್ತೆ ಹಚ್ಚಲು ರಕ್ತ ಪರೀಕ್ಷೆ ನಡೆಸಲಾಗಿದೆ ಎಂದು ತನಿಖಾಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲಯವು ಅಪರಾಧ ದೃಶ್ಯ ಆಧಾರಿತ ವರದಿಯನ್ನೂ ಪೊಲೀಸರಿಗೆ ಸಲ್ಲಿಸಿದೆ. ಮೃತ ಯುವತಿಯ ಸಾವಿನ ಕಾರಣ ಪತ್ತೆ ಹಚ್ಚುವ ಒಳ ಅಂಗಗಳ ಪರೀಕ್ಷೆ ವರದಿಯನ್ನು ಇಂದು ನೀಡಲಿದೆ ಎಂದು ಹೇಳಿದ್ದಾರೆ.
ಜನವರಿ 1 ರಂದು ಅಂಜಲಿ ಸಿಂಗ್ (20) ಎಂಬ ಯುವತಿಯು ಚಾಲನೆ ಮಾಡುತ್ತಿದ್ದ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿತ್ತು. ಕಾರಿನಡಿ ಯುವತಿ ಸಿಲುಕಿರುವುದು ತಿಳಿದಿದ್ದರೂ ಆರೋಪಿಗಳು ಕಾರನ್ನು ನಿಲ್ಲಿಸದೆ 12 ಕಿ.ಮೀ.ವರೆಗೆ ಸಾಗಿದ್ದರು. ಪ್ರಕರಣ ದೆಹಲಿಯ ಹೊರಭಾಗದ ಸುಲ್ತಾನ್‌ಪುರಿಯಲ್ಲಿ ವರದಿಯಾಗಿತ್ತು. ಈ ಸಂಬಂಧ ಪೊಲೀಸರು ಇದುವರೆಗೆ 7 ಆರೋಪಿಗಳನ್ನು ಬಂಧಿಸಲಾಗಿದೆ.
ಆರಂಭದಲ್ಲಿ ದೀಪಕ್ ಖನ್ನಾ (26), ಅಮಿತ್ ಖನ್ನಾ (25), ಕೃಷ್ಣ (27), ಮಿಥುನ್ (26)ಮತ್ತು ಮನೋಜ್ ಮಿತ್ತಲ್ ಎಂಬುವವರನ್ನು ಬಂಧಿಸಲಾಗಿತ್ತು. ಆರೋಪಿಗಳಿಗೆ ರಕ್ಷಣೆ ನೀಡಿದ ಆರೋಪದಲ್ಲಿ ಅಶುತೋಷ್ ಹಾಗೂ ಅಂಕುಶ್ ಖನ್ನಾ ಎಂಬುವವರನ್ನೂ ನಂತರ ಬಂಧಿಸಲಾಗಿದೆ.
ಘಟನಾ ಸ್ಥಳದ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿದ್ದ 11 ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಲೋಪದ ಆರೋಪದಲ್ಲಿ ಅಮಾನತು ಮಾಡಲಾಗಿದೆ. ಅಪಘಾತವಾದಾಗ ಘಟನಾ ಸ್ಥಳದ ವ್ಯಾಪ್ತಿಯಲ್ಲಿನ ಪೊಲೀಸ್ ನಿಯಂತ್ರಣ ಕೊಠಡಿ ಹಾಗೂ ರಾತ್ರಿ ಗಸ್ತಿನಲ್ಲಿದ್ದ ಎಲ್ಲ ಸಿಬ್ಬಂದಿಯನ್ನು ಕರ್ತವ್ಯಲೋಪದ ಆರೋಪದ ಮೇಲೆ ಅಮಾನತುಗೊಳಿಸುವಂತೆ ಕೇಂದ್ರ ಗೃಹ ಸಚಿವಾಲಯವು ದೆಹಲಿ ಪೊಲೀಸ್ ಇಲಾಖೆಗೆ ಸೂಚನೆ ನೀಡಿತ್ತು.
ಇವನ್ನೂ ಓದಿ
* ಕಾರಿನಡಿ ಯುವತಿಯ ಮೃತದೇಹ ಎಳೆದೊಯ್ದ ಪ್ರಕರಣ: 11 ಪೊಲೀಸ್ ಸಿಬ್ಬಂದಿ ಅಮಾನತು
* ಕಾರಿನಡಿ ಯುವತಿಯ ಮೃತದೇಹ ಎಳೆದೊಯ್ದ ಪ್ರಕರಣ: ಆರೋಪಿ ಜಾಮೀನು ಅರ್ಜಿ ವಜಾ
* ಯುವತಿಯ ದೇಹ ಕಾರಿನಡಿ ಸಿಲುಕಿರುವುದು ಆರೋಪಿಗಳಿಗೆ ಗೊತ್ತಿತ್ತು: ಪೊಲೀಸ್ ಮಾಹಿತಿ
* ವಾಹನದಡಿಯಲ್ಲಿ ಯುವತಿ ಎಳೆದೊಯ್ದ ಪ್ರಕರಣ: ಆರೋಪಿಗೆ ಸಹಕರಿಸಿದ ವ್ಯಕ್ತಿಗೆ ಜಾಮೀನು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.