ADVERTISEMENT

ಛತ್ತೀಸಗಢದ ಕಾಂಕೇರ್‌ನಲ್ಲಿ ಎನ್‌ಕೌಂಟರ್: ನಕ್ಸಲರಿಗೆ ಭಾರಿ ಹಿನ್ನಡೆ

ನಿಷೇಧಿತ ಸಂಘಟನೆಯ ಅಕ್ರಮ ಹಣ ಸಂಗ್ರಹ, ಪೂರೈಕೆ ಮೇಲೆ ಪ್ರಹಾರ

ಪಿಟಿಐ
Published 17 ಏಪ್ರಿಲ್ 2024, 12:58 IST
Last Updated 17 ಏಪ್ರಿಲ್ 2024, 12:58 IST
<div class="paragraphs"><p>ಬಸ್ತಾರ್ ವಲಯದ ಐಜಿಪಿ ಸುಂದರರಾಜ್‌ ಪಿ. ಅವರು ಮಂಗಳವಾರ ನಡೆದ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳನ್ನು ಕಾಂಕೇರ್‌ನಲ್ಲಿ ಬುಧವಾರ ಪರಿಶೀಲಿಸಿದರು   </p></div>

ಬಸ್ತಾರ್ ವಲಯದ ಐಜಿಪಿ ಸುಂದರರಾಜ್‌ ಪಿ. ಅವರು ಮಂಗಳವಾರ ನಡೆದ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳನ್ನು ಕಾಂಕೇರ್‌ನಲ್ಲಿ ಬುಧವಾರ ಪರಿಶೀಲಿಸಿದರು

   

–ಪಿಟಿಐ ಚಿತ್ರ 

ಕಾಂಕೇರ್‌(ಛತ್ತೀಸಗಢ): ಕಾಂಕೇರ್‌ ಜಿಲ್ಲೆಯಲ್ಲಿ ನಡೆಸಿದ ಕಾರ್ಯಾಚರಣೆಯಿಂದಾಗಿ  ಉತ್ತರ ಬಸ್ತಾರ್‌ ವಿಭಾಗದ ನಕ್ಸಲರ ಸಮಿತಿಗೆ ಭಾರಿ ಹಿನ್ನಡೆ ಆಗಿದೆ. ನಿಷೇಧಿತ ನಕ್ಸಲ್ ಸಂಘಟನೆಯ ಕಾನೂನುಬಾಹಿರ ಹಣ ಸಂಗ್ರಹಣೆ ಹಾಗೂ ಪೂರೈಕೆಯನ್ನು ಇದೇ ಸಮಿತಿ ನಿರ್ವಹಣೆ ಮಾಡುತ್ತಿದ್ದುದು ಇದಕ್ಕೆ ಕಾರಣ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.

ADVERTISEMENT

‘ನಕ್ಸಲರ ನಿಗ್ರಹಕ್ಕೆ ಸಂಬಂಧಿಸಿ ಮಾಡಬೇಕಾದ ಕೆಲಸ ಸಾಕಷ್ಟಿದೆ. ಆದರೆ, ಈ ನಿಟ್ಟಿಯಲ್ಲಿ ಪೊಲೀಸರು ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿದ್ದಾರೆ’ ಎಂದು ಬಸ್ತಾರ್ ವಲಯದ ಐಜಿಪಿ ಪಿ.ಸುಂದರರಾಜ್‌ ಹೇಳಿದ್ದಾರೆ.

ಕಾಂಕೇರ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆ ಸಿಬ್ಬಂದಿ ಕನಿಷ್ಠ 29 ಮಂದಿ ನಕ್ಸಲರನ್ನು ಹೊಡೆದುರುಳಿಸಿದ್ದರು. ಈ ವರ್ಷದಲ್ಲಿ ನಡೆದ ಅತಿದೊಡ್ಡ ಸಂಘರ್ಷ ಇದಾಗಿದ್ದು, ಈ ಗುಂಡಿನ ಚಕಮಕಿಯಲ್ಲಿ ನಕ್ಸಲರ ಕೆಲ ನಾಯಕರೂ ಹತರಾಗಿದ್ದಾರೆ.

‘ಛತ್ತೀಸಗಢದ ಕಾಂಕೇರ್‌, ನಾರಾಯಣಪುರ ಹಾಗೂ ನೆರೆಯ ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಗಳು ಸಂಧಿಸುವ ಪ್ರದೇಶವು ನಕ್ಸಲರ ಸಂಘಟನೆಯ ಉತ್ತರ ಬಸ್ತಾರ್‌ ವಲಯದ ಈ ಸಮಿತಿಗೆ ಸುರಕ್ಷಿತ ತಾಣ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ, ಈ ಪ್ರದೇಶದಲ್ಲಿಯೇ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು’ ಎಂದು ಸುಂದರರಾಜ್‌ ಹೇಳಿದ್ದಾರೆ.

‘ಉತ್ತರ ಬಸ್ತಾರ್‌ ವಿಭಾಗದಲ್ಲಿ ರಾವ್‌ಘಾಟ್‌, ಪರ್ತಾಪುರ, ಕುವೆ ಹಾಗೂ ಕಿಸೊಡೊ ಎಂಬ ನಾಲ್ಕು ಸಮಿತಿಗಳಿದ್ದು, ಇವುಗಳಲ್ಲಿ 70–80 ಸದಸ್ಯರಿದ್ದಾರೆ’ ಎಂದೂ ತಿಳಿಸಿದ್ದಾರೆ.

‘ಬೇರೆ ವಿಭಾಗದ ಸಮಿತಿಗಳು ಬೇರೆ ಬೇರೆ ಕಾರ್ಯ ನಿರ್ವಹಣೆ ಮಾಡುತ್ತವೆ. ಉತ್ತರ ಬಸ್ತಾರ್‌ ವಿಭಾಗದ ಸಮಿತಿಗಳು ಗುತ್ತಿಗೆದಾರರು ಮತ್ತು ಇತರರಿಂದ ಹಣ ವಸೂಲಿ ಮಾಡಿ, ಈ ಹಣ ಸಾಗಣೆಯ ಜಾಲವನ್ನು ನಿರ್ವಹಣೆ ಮಾಡುತ್ತವೆ’ ಎಂದು ಹೇಳಿದ್ದಾರೆ.

‘ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಹತರಾದ ನಕ್ಸಲರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಈ ವರೆಗೆ, ಶಂಕರರಾವ್‌ ಮತ್ತು ಲಲಿತಾ ಎಂಬುವವರನ್ನು ಗುರುತಿಸಲಾಗಿದೆ. ಹತ್ಯೆಯಾದವರಲ್ಲಿ 15 ಜನ ಮಹಿಳೆಯರು ಸೇರಿದ್ದಾರೆ. ಹತ್ಯೆಯಾದವರ ಪೈಕಿ ಹೆಚ್ಚಿನವರು ಪರ್ತಾಪುರ ಪ್ರದೇಶದ ಸಮಿತಿಗೆ ಸೇರಿದವರಿರಬಹುದು’ ಎಂದು ಸುಂದರರಾಜ್‌ ಹೇಳಿದ್ದಾರೆ.

‘ಇದೇ 19ರಂದು ಲೋಕಸಭಾ ಚುನಾವಣೆಯ ಮತದಾನ ನಡೆಯಲಿರುವ ಕಾರಣ, ಈ ಪ್ರದೇಶದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಕಾಂಕೇರ್‌ ಮತ್ತು ಬಸ್ತಾರ್‌ನಲ್ಲಿ (ಏಪ್ರಿಲ್‌ 26ರಂದು ಮತದಾನ) ಶಾಂತಿಯುತ ಮತದಾನ ನಡೆಯುವ ವಿಶ್ವಾಸ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.