ADVERTISEMENT

ಸಂಸದೀಯ ಸಮಿತಿ ಸಭೆಗಳಲ್ಲೂ ಕನ್ನಡ

ಈಡೇರಿತು ಕನ್ನಡದ ಸಂಸದರ ಬೇಡಿಕೆ:

ಸಿದ್ದಯ್ಯ ಹಿರೇಮಠ
Published 19 ನವೆಂಬರ್ 2019, 19:46 IST
Last Updated 19 ನವೆಂಬರ್ 2019, 19:46 IST

ನವದೆಹಲಿ: ಸಂಸತ್‌ನ ವಿವಿಧ ಸ್ಥಾಯಿ ಸಮಿತಿಗಳಿಗೆ ನೇಮಕವಾಗುವ ರಾಜ್ಯದ ಸಂಸತ್‌ ಸದಸ್ಯರು ಸಭೆಗಳಲ್ಲಿ ಎದುರಿಸುತ್ತಿದ್ದ ಭಾಷಾ ಸಮಸ್ಯೆಗೆ ತೆರೆ ಬಿದ್ದಿದೆ.

ಸಾಮಾಜಿಕ ನ್ಯಾಯ ಸಮಿತಿ ಸದಸ್ಯರಾಗಿರುವ ಬಳ್ಳಾರಿ ಸಂಸದ ಎನ್.ದೇವೇಂದ್ರಪ್ಪ ಅವರ ಬೇಡಿಕೆಯ ಮೇರೆಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುವ ಇತರ ಸದಸ್ಯರ ನಡಾವಳಿಗಳನ್ನು ಕನ್ನಡಕ್ಕೆ ಅನುವಾದಿಸುವ ಸೌಲಭ್ಯ ಒದಗಿಸುವ ಮೂಲಕ ಭಾಷೆಯ ತೊಡಕನ್ನು ನಿವಾರಿಸಲಾಗಿದೆ.

ಲೋಕಸಭೆಯಲ್ಲಿ ಕನ್ನಡ ಭಾಷಣದ ಇಂಗ್ಲಿಷ್‌ ಮತ್ತು ಹಿಂದಿ ಅನುವಾದಕ್ಕೆ ಅವಕಾಶ ಕೋರಿದ್ದ ಜೆ.ಎಚ್‌. ಪಟೇಲ್‌ ಅವರು ಯಶಸ್ಸನ್ನು ಕಂಡು 5 ದಶಕಗಳು ಕಳೆದಿರುವ ಈ ಸಂದರ್ಭದಲ್ಲಿ ಸಂಸದೀಯ ಸಮಿತಿ ಸಭೆಗಳಲ್ಲೂ ಕನ್ನಡದ ಕಲರವ ಕೇಳಿಬಂದಿದೆ.

ಕರ್ನಾಟಕ ರಾಜ್ಯೋತ್ಸವ ಆಚರಣೆಯ ನವೆಂಬರ್‌ ತಿಂಗಳಲ್ಲೇ ಇಂಥ ಉತ್ತಮ ಬೆಳವಣಿಗೆ ದಾಖಲಾಗಿರುವುದು ಕನ್ನಡಿಗರು ಹೆಮ್ಮೆ ಪಡುವಂತಾಗಿದೆ. ಬೇರೆ ಭಾಷೆ ಅರ್ಥವಾಗದೆ, ಸಭೆಗಳಲ್ಲಿ ಧ್ವನಿ ಎತ್ತುವುದಕ್ಕೇ ಹಿಂಜರಿಯುತ್ತಿದ್ದ ರಾಜ್ಯದ ಸಂಸದರಿಗೆ ಇದರಿಂದ ಅನುಕೂಲ ಆದಂತಾಗಿದೆ.

‘ಕಳೆದ ಅಕ್ಟೋಬರ್‌ನಲ್ಲಿ ನಡೆದಿದ್ದ ಸಮಿತಿಯ ಮೊದಲ ಸಭೆಯಲ್ಲಿ ನನಗೆ ಭಾಷೆಯ ಸಮಸ್ಯೆ ಎದುರಾಗಿತ್ತು. ಮುಂದಿನ ಸಭೆಯಲ್ಲಿ ಕನ್ನಡಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದೆ. ಇದೇ 5 ಮತ್ತು 6ರಂದು ನಡೆದ ಸಭೆಯಲ್ಲಿ ನನ್ನ ಬೇಡಿಕೆ ಈಡೇರಿತು. ಕನ್ನಡದಲ್ಲಿದ್ದ ನನ್ನ ಭಾಷಣವನ್ನು ಸಮಿತಿಯ ಅಧ್ಯಕ್ಷರು ಮತ್ತು ಇತರ ಸದಸ್ಯರಿಗೆ ಅರ್ಥವಾಗುವಂತೆ ತಕ್ಷಣವೇ ಇಂಗ್ಲಿಷ್‌ ಮತ್ತು ಹಿಂದಿಗೆ, ಅವರು ಮಾತನಾಡಿದ್ದನ್ನು ನನಗೆ ಕನ್ನಡಕ್ಕೆ ಅನುವಾದಿಸಲಾಯಿತು’ ಎಂದು ಸಂಸದ ಎನ್‌.ದೇವೇಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಸತ್‌ನ ಉಭಯ ಸದನಗಳ ಕಲಾಪಕ್ಕೆ ಮುನ್ನ ತಿಳಿಸುವಂತೆಯೇ, ಸಾಮಾಜಿಕ ನ್ಯಾಯ ಸಮಿತಿ ಸಭೆಯ ನಡಾವಳಿ ಕುರಿತು ಮೊದಲೇ ಮಾಹಿತಿ ನೀಡಲಾಗಿತ್ತು. ಸಮಿತಿಯ ಅಧ್ಯಕ್ಷರ ಸೂಚನೆಯ ಮೇರೆಗೆ ಸಭೆಗೆ ತೆರಳಿ ಅನುವಾದ ಕಾರ್ಯದಲ್ಲಿ ಭಾಗವಹಿಸಿದೆ’ ಎಂದು ಹಿರಿಯ ಸಂಸದೀಯ ಅನುವಾದಕ, ಕರ್ನಾಟಕದ ಎನ್‌.ಪಿ. ಚಂದ್ರಶೇಖರ್‌ ಹೇಳಿದರು.

ಹಿಂದಿ, ಇಂಗ್ಲಿಷ್‌ ಬಾರದ ಸದಸ್ಯರು ಸಭೆಯಲ್ಲಿ ಯಾವ ವಿಷಯ ಚರ್ಚಿಸಲಾಗುತ್ತಿದೆ ಎಂಬುದೇ ತಿಳಿಯದೆ ಸುಮ್ಮನೆ ಕುಳಿತುಕೊಳ್ಳುತ್ತಿದ್ದರು. ಅನುವಾದದ ಸೌಲಭ್ಯ ಕಲ್ಪಿಸಿರುವುದರಿಂದ ಅಂಥವರಿಗೆ ಅನುಕೂಲವಾಗಲಿದೆ. ಇದು ಉತ್ತಮ ಬೆಳವಣಿಗೆ ಎಂದು ರಾಜ್ಯದ ಕೆಲವು ಹಿರಿಯ ಸಂಸದರು ತಿಳಿಸಿದರು.

‘ಬ್ರಿಟನ್‌ ಸಂಸತ್‌ನಲ್ಲಿ 24 ಭಾಷೆಗಳ ಅನುವಾದದ ಸೌಲಭ್ಯ ಇದೆ. ಅದೇ ಮಾದರಿಯ ಸೌಲಭ್ಯ ನಮ್ಮ ಸಂಸತ್‌ ಕಲಾಪದ ವೇಳೆ ದೊರೆಯುವಂತಾದಲ್ಲಿ ಮಾತೃ ಭಾಷೆಯನ್ನು ಬಿಟ್ಟು ಬೇರೆ ಭಾಷೆ ಬಾರದ ಸಂಸದರಿಗೆ ನೆರವಾಗಲಿದೆ’ ಎಂದು ಅವರು ವಿವರಿಸಿದರು.

ಸಾಮಾಜಿಕ ನ್ಯಾಯ ಸಮಿತಿ ಸಭೆಯಲ್ಲಿ ಕನ್ನಡದಲ್ಲೇ ಮಾತನಾಡಲು ಅವಕಾಶ ದೊರೆತಿದ್ದರಿಂದ ನನ್ನ ಕ್ಷೇತ್ರಕ್ಕೆ ದೊರೆಯಬೇಕಿರುವ ಕೇಂದ್ರದ ಸೌಲಭ್ಯಗಳ ಕುರಿತು ಬೇಡಿಕೆ ಸಲ್ಲಿಸಿದೆ. ಇತರ ಸದಸ್ಯರ ಮಾತುಗಳೂ ಅರ್ಥವಾದವು ಎಂದು ಬಳ್ಳಾರಿ ಸಂಸದಎನ್‌.ದೇವೇಂದ್ರಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.