ADVERTISEMENT

ಕಾವಡ್‌ ಯಾತ್ರೆ | ಮಳಿಗೆಗಳ ಮುಂದೆ ಹೆಸರು ಪ್ರದರ್ಶನ: ತಡೆಯಾಜ್ಞೆ ವಿಸ್ತರಣೆ

ಪಿಟಿಐ
Published 26 ಜುಲೈ 2024, 13:44 IST
Last Updated 26 ಜುಲೈ 2024, 13:44 IST
.
.   

ನವದೆಹಲಿ: ‘ಕಾವಡ್‌ ಯಾತ್ರೆ’ಯ ಮಾರ್ಗಗಳಲ್ಲಿರುವ ತಿಂಡಿ–ತಿನಿಸುಗಳ ಮಳಿಗೆಗಳ ಮಾಲೀಕರು ತಮ್ಮ ಹೆಸರು ಮತ್ತು ಇತರ ವಿವರಗಳನ್ನು ಮಳಿಗೆಗಳ ಮುಂದೆ ಪ್ರದರ್ಶಿಸುವಂತೆ ಹೊರಡಿಸಿದ್ದ ನಿರ್ದೇಶನಗಳಿಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿದೆ.

ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್‌ ಮತ್ತು ಎಸ್‌ವಿಎನ್‌ ಭಟ್ಟಿ ಅವರಿದ್ದ ಪೀಠ, ‘ಜುಲೈ 22ರಂದು ನೀಡಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟೀಕರಣ ನೀಡುವುದಿಲ್ಲ’ ಎಂದು ಶುಕ್ರವಾರ ತಿಳಿಸಿತು. ‘ಏಕೆಂದರೆ, ನಮ್ಮ ಆದೇಶದಲ್ಲಿ ಹೇಳಬೇಕಾದುದನ್ನು ಜುಲೈ 22ರಂದೇ ಹೇಳಿದ್ದೇವೆ. ಹೆಸರುಗಳನ್ನು ಬಹಿರಂಗಪಡಿಸಲು ಯಾರನ್ನೂ ಒತ್ತಾಯಿಸುವುದಿಲ್ಲ’ ಎಂದಿತು.

ಮಳಿಗೆಗಳ ಮಾಲೀಕರು ಮಳಿಗೆಗಳ ಮುಂದೆ ತಮ್ಮ ಹೆಸರು ಪ್ರದರ್ಶಿಸುವಂತೆ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಸುತ್ತೋಲೆ ಹೊರಡಿಸಲಾಗಿತ್ತು. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಪಾಲಿಕೆಯ ಇದೇ ರೀತಿಯ ಸುತ್ತೋಲೆ ಹೊರಡಿಸಿತ್ತು. ಸುಪ್ರೀಂ ಕೋರ್ಟ್‌ ಈ ಮೂರೂ ರಾಜ್ಯಗಳಿಗೆ ನೋಟಿಸ್‌ ಜಾರಿಗೊಳಿಸಿತ್ತು.

ADVERTISEMENT

ನೋಟಿಸ್‌ಗೆ ಉತ್ತರಿಸಿರುವುದಾಗಿ ಉತ್ತರ ಪ್ರದೇಶ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್‌ ರೋಹಟಗಿ ತಿಳಿಸಿದರು. ಸುತ್ತೋಲೆಗೆ ತಡೆಯಾಜ್ಞೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯಿಸುವಂತೆ ಪೀಠವು ಮಧ್ಯಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳಿಗೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಆಗಸ್ಟ್‌ 5ಕ್ಕೆ ನಿಗದಿಪಡಿಸಿತು.

‘ಈಗ ಇರುವ ಕಾನೂನಿನ ಅಡಿಯಲ್ಲೇ ಸುತ್ತೋಲೆ ಹೊರಡಿಸಿದ್ದೇವೆ. ಮುಂದಿನ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಳ್ಳಬೇಕು. ವಿಳಂಬವಾದರೆ ವಿಚಾರಣೆ ಪ್ರಕ್ರಿಯೆಯೇ ನಿಷ್ಪ್ರಯೋಜಕವಾಗುತ್ತದೆ’ ಎಂದು ಮುಕುಲ್‌ ರೋಹಟಗಿ ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಹೃಷಿಕೇಶ್ ರಾಯ್‌, ‘ಹಾಗಾದಲ್ಲಿ ಈ ಕಾನೂನು ರಾಜ್ಯದಾದ್ಯಂತ ಜಾರಿಯಾಗಲಿ. ಕೆಲವು ಪ್ರದೇಶಗಳಿಷ್ಟೇ ಸೀಮಿತಗೊಳಿಸಬೇಡಿ. ಎಲ್ಲ ಕಡೆ ಕಾನೂನು ಜಾರಿಗೊಳಿಸಲಾಗಿದೆ ಎಂಬುದನ್ನು ತೋರಿಸುವ ಅಫಿಡವಿಟ್ ಸಲ್ಲಿಸಿ’ ಎಂದು ಹೇಳಿದರು. 

ಉತ್ತರ ಪ್ರದೇಶ ಸರ್ಕಾರ ಸಮರ್ಥನೆ
‘ಕಾವಡ್‌ ಯಾತ್ರೆ’ಗೆ ಸಂಬಂಧಿಸಿದಂತೆ ತಾನು ಹೊರಡಿಸಿರುವ ನಿರ್ದೇಶನವನ್ನು ಉತ್ತರ ಪ್ರದೇಶ ಸರ್ಕಾರ ಸಮರ್ಥಿಸಿಕೊಂಡಿದೆ. ‘ಪಾರದರ್ಶಕತೆಯನ್ನು ತರುವುದು ಯಾತ್ರೆಯ ವೇಳೆ ಉಂಟಾಗಬಹುದಾದ ‘ಸಂಭಾವ್ಯ ಗೊಂದಲ’ ತಪ್ಪಿಸುವುದು ಮತ್ತು ಶಾಂತಿಯುತ ಯಾತ್ರೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಹಿಂದಿನ ಉದ್ದೇಶ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.