ಜೈಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ, ‘ನಾನು ಸಾವರ್ಕರ್ ಅಲ್ಲ’ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಕಪಿಲ್ ಮಿಶ್ರಾ , ‘ಅವರು ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಆಗಲು ಸಾಧ್ಯವೇ ಇಲ್ಲ’ ಎಂದಿದ್ದಾರೆ.
‘ಸನಾತನ ಸಂಸ್ಕೃತಿ ಮತ್ತು ಹಿಂದುತ್ವ’ದ ಕುರಿತು ನವೋನ್ಮೇಶ್ ಫೌಂಡೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಹುಲ್ ಗಾಂಧಿ ಕೆಲವು ದಿನಗಳ ಹಿಂದಷ್ಟೇ ಹೇಳಿರುವ ಅತಿದೊಡ್ಡ ಸುಳ್ಳು ಎಂದರೆ, ‘ನಾನು ಗಾಂಧಿ, ಸಾವರ್ಕರ್ ಅಲ್ಲ’ ಎಂಬುದು. ನೀವು ನಿಜವಾದ ಗಾಂಧಿ ಕೂಡ ಅಲ್ಲ, ಸಾವರ್ಕರ್ ಆಗಲೂ ಸಾಧ್ಯವಿಲ್ಲ. ಏಕೆಂದರೆ ಸಾವರ್ಕರ್ ಆಗಲು ಮೊದಲು ದೇಶಪ್ರೇಮಿ ಆಗಿರಬೇಕು ಮತ್ತು ‘ಅಖಂಡ ಸನಾತನ ಭಾರತ’ದ ಬಗ್ಗೆ ಅಚಲ ನಂಬಿಕೆ ಹೊಂದಿರಬೇಕು’ ಎಂದು ಹೇಳಿದರು.
‘ಮೊರಾದಾಬಾದ್ ವ್ಯಾಪಾರಿ ‘ಆಗ್ರಾದ ಪೇಟ ಲಭ್ಯವಿದೆ’ ಎಂಬ ನಾಮಫಲಕ ಹಾಕಿಕೊಂಡಂತೆ, ಇವರು ‘ಗಾಂಧಿ’ ಹೆಸರಿನ ನಾಮಫಲಕ ಇಟ್ಟುಕೊಂಡಿದ್ದಾರೆ. ಇದರಿಂದಾಗಿ ಇವರ ‘ವ್ಯಾಪಾರ’ ನಡೆಯುತ್ತಿದೆ’ ಎಂದು ಟೀಕಿಸಿದರು.
‘ರಾಹುಲ್ ಗಾಂಧಿ ದೊಡ್ಡ ಬಂಗಲೆಯಲ್ಲಿದ್ದು ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನಿಸಿದ್ದರು. ಇಂದು ರಾಮಮಂದಿರ ನಿರ್ಮಾಣವಾಗಿದೆ, ಅದೇ ಸಮಯದಲ್ಲಿ ಅವರು ಬಂಗಲೆಯನ್ನು ಕಳೆದುಕೊಂಡಿದ್ದಾರೆ ’ ಎಂದು ವ್ಯಂಗ್ಯ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.