ADVERTISEMENT

ಕಾಂಗ್ರೆಸ್‌ ತೊರೆದ ಕಪಿಲ್‌ ಸಿಬಲ್‌: ಎಸ್‌ಪಿ ಬೆಂಬಲದೊಂದಿಗೆ ರಾಜ್ಯಸಭೆಗೆ ನಾಮಪತ್ರ

​ಪ್ರಜಾವಾಣಿ ವಾರ್ತೆ
Published 25 ಮೇ 2022, 18:31 IST
Last Updated 25 ಮೇ 2022, 18:31 IST
ಕಪಿಲ್ ಸಿಬಲ್ – ಪಿಟಿಐ ಚಿತ್ರ
ಕಪಿಲ್ ಸಿಬಲ್ – ಪಿಟಿಐ ಚಿತ್ರ   

ಲಖನೌ/ನವದೆಹಲಿ: ಕಪಿಲ್‌ ಸಿಬಲ್‌ ಅವರು ಉತ್ತರ ಪ್ರದೇಶದಿಂದ ಬುಧವಾರ ರಾಜ್ಯಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಖಿಲೇಶ್‌ ಯಾದವ್‌ ಅವರ ಸಮಾಜವಾದಿ ಪಕ್ಷವು (ಎಸ್‌ಪಿ) ಅವರಿಗೆ ಬೆಂಬಲ ಸೂಚಿಸಿದೆ.

2 ವರ್ಷಗಳಿಂದ ಪಕ್ಷದ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಹಿರಿಯ ಸಂಸದ ಕಪಿಲ್ ಸಿಬಲ್ ಅವರು ಕಾಂಗ್ರೆಸ್ ಜೊತೆಗಿನ ತಮ್ಮ 3 ದಶಕಗಳ ಕಾಲದ ಒಡನಾಟವನ್ನು ಕೊನೆಗೊಳಿಸಿರುವುದಾಗಿ ಬುಧವಾರ ಘೋಷಿಸಿದ್ದಾರೆ. ಮೇ 16ರಂದೇ ಕಾಂಗ್ರೆಸ್‌ ತೊರೆದಿರುವುದಾಗಿ 74 ವರ್ಷದ ಖ್ಯಾತ ವಕೀಲ, ರಾಜಕಾರಣಿ ಸಿಬಲ್‌ ಹೇಳಿದ್ದಾರೆ.

ಚುನಾವಣೆಗಳಲ್ಲಿ ಸೋಲನುಭವಿಸಿ ಜರ್ಜರಿತವಾಗಿರುವ ಕಾಂಗ್ರೆಸ್‌ಗೆ ತಮ್ಮ ನಿರ್ಗಮನವು ಮತ್ತೊಂದು ಆಘಾತವಾಗಿದೆ ಎಂದು ಸಿಬಲ್ ತಿಳಿಸಿದ್ದಾರೆ.

ADVERTISEMENT

ಪಂಜಾಬ್‌ ಕಾಂಗ್ರೆಸ್‌ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸುನಿಲ್‌ ಜಾಖಡ್‌ ಹಾಗೂ ಪಾಟೀದಾರ್‌ ಮೀಸಲಾತಿ ಪರ ಹೋರಾಟಗಾರ ಹಾರ್ದಿಕ್‌ ಪಟೇಲ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಸಿಬಲ್‌ ಸಹ ಕಾಂಗ್ರೆಸ್‌ ತೊರೆದಿದ್ದಾರೆ.

ಲಖನೌದ ಎಸ್‌ಪಿ ಕಚೇರಿಯಲ್ಲಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ ನಂತರ, ಅಖಿಲೇಶ್, ಪಕ್ಷದ ಹಿರಿಯ ಮುಖಂಡ ರಾಮಗೋಪಾಲ್ ಯಾದವ್ ಅವರ ಸಮ್ಮುಖದಲ್ಲಿ ಸಿಬಲ್‌ ನಾಮಪತ್ರ ಸಲ್ಲಿಸಿದರು.

ಗಾಂಧಿ ಕುಟುಂಬದ ವಿರುದ್ಧ ತೀವ್ರ ಟೀಕೆಗಳನ್ನು ಮತ್ತು ಕಾಂಗ್ರೆಸ್ ನಾಯಕತ್ವದಿಂದ ಗಾಂಧಿ ಕುಟುಂಬವನ್ನು ಬದಲಿಸಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಸಿಬಲ್‌ ಅವರ ಕಾಂಗ್ರೆಸ್ ರಾಜ್ಯಸಭಾ ಸದಸ್ಯತ್ವದ ಅವಧಿ ಮುಂದಿನ ತಿಂಗಳು ಕೊನೆಗೊಳ್ಳಲಿದೆ. ಉತ್ತರ ಪ್ರದೇಶದಲ್ಲಿ 111 ಶಾಸಕರನ್ನು ಹೊಂದಿರುವ ಸಮಾಜವಾದಿ ಪಕ್ಷವು ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ಮೂರು ರಾಜ್ಯಸಭಾ ಸ್ಥಾನಗಳನ್ನು ಪಡೆಯುವ ಸ್ಥಿತಿಯಲ್ಲಿದೆ. ಆಡಳಿತಾರೂಢ ಬಿಜೆಪಿ 255 ಮತ್ತು ಮಿತ್ರಪಕ್ಷಗಳ 20 ಶಾಸಕರ ಬಲವನ್ನು ಹೊಂದಿದ್ದು, ಉಳಿದ ಎಂಟು ಸ್ಥಾನಗಳನ್ನು ಪಡೆಯಲಿದೆ.

ಕಾಂಗ್ರೆಸ್‌ನ ಭಿನ್ನಮತೀಯ ಗುಂಪು ಜಿ–23ಯಲ್ಲಿ ಪ್ರಮುಖರಾಗಿದ್ದ ಸಿಬಲ್‌ ಅವರು ಪಕ್ಷದ ಪುನರ್‌ರಚನೆಗೆ ಒತ್ತಾಯಿಸಿದ್ದರು. ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಅವರು, ‘ಪಕ್ಷದ ಸದಸ್ಯರಾದರೆ ಅಲ್ಲಿನ ಶಿಸ್ತನ್ನು ಪಾಲಿಸಬೇಕಾಗುತ್ತದೆ. ಹೀಗಾಗಿಯೇ ಸ್ವತಂತ್ರ ಅಭ್ಯರ್ಥಿಯಾಗಿ ಹೋರಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

‘ನನಗೆ ಕಾಂಗ್ರೆಸ್ ಜೊತೆ 30–31 ವರ್ಷಗಳ ಸಂಬಂಧವಿದೆ. ಈ ಸಂಬಂಧವನ್ನು ಕಳಚಿಕೊಳ್ಳುವುದು ಅಷ್ಟು ಸುಲಭವಲ್ಲ. ರಾಜೀವ್‌ಜಿ (ಮಾಜಿ ಪ್ರಧಾನಿ ರಾಜೀವ್ ಗಾಂಧಿ) ಕಾರಣದಿಂದ ನಾನು ಕಾಂಗ್ರೆಸ್ ಸೇರಿದ್ದೆ’ ಎಂದು ನಾಮಪತ್ರ ಸಲ್ಲಿಸಿದ ನಂತರ ಸಿಬಲ್‌ ಸುದ್ದಿಗಾರರಿಗೆ ತಿಳಿಸಿದರು.

ಪಕ್ಷಕ್ಕೆ ನಷ್ಟವಿಲ್ಲ: ಕಾಂಗ್ರೆಸ್‌
ಕೊಚ್ಚಿ:
‘ಸಿಬಲ್‌ ಅವರು ಪಕ್ಷ ತೊರೆದಿದ್ದರಿಂದ ಯಾವುದೇ ನಷ್ಟವುಂಟಾಗುವುದಿಲ್ಲ. ರಾಷ್ಟ್ರದ ರಾಜಕೀಯದಲ್ಲಿ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿದೆ. ವಿವಿಧ ರಾಜ್ಯಗಳಲ್ಲಿ ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಸೇರುವ ಅನೇಕ ನಾಯಕರ ಮೇಲೆ ಇದೇನೂ ಪರಿಣಾಮ ಬೀರುವುದಿಲ್ಲ’ ಎಂದು ಕಾಂಗ್ರೆಸ್‌ ಹೇಳಿದೆ.

‘ಸಿಬಲ್ ಅವರು ರಾಜೀನಾಮೆ ಪತ್ರದಲ್ಲಿ ಕಾಂಗ್ರೆಸ್ ಸಿದ್ಧಾಂತದ ವಿರುದ್ಧ ಏನನ್ನೂ ಹೇಳಿಲ್ಲ. , ಪಕ್ಷದಲ್ಲಿ ಅವಕಾಶ ಕಲ್ಪಿಸಲು ಯಾವುದೇ ಸ್ಥಾನಗಳಿಲ್ಲದ ಕಾರಣ ಸಿಬಲ್ ರಾಜ್ಯಸಭಾ ಸ್ಥಾನಕ್ಕಾಗಿ ಮಾತ್ರ ಕಾಂಗ್ರೆಸ್‌ ತೊರೆದಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.