ಬೆಂಗಳೂರು: ಭಾರತದ ಇತಿಹಾಸದಲ್ಲಿ 1999ರಲ್ಲಿ ಕಾರ್ಗಿಲ್‌ನಲ್ಲಿ ನಡೆದ ಯುದ್ಧದಲ್ಲಿ ಭಾರತದ ವೀರ ಯೋಧರ ಸಾಹಸ ಹಾಗೂ ಬಲಿದಾನವನ್ನು ನೆನೆಯುವುದರ ಜತೆಗೆ, ಪಾಕಿಸ್ತಾನ ವಿರುದ್ಧ ದೇಶ ವಿಜಯ ಸಾಧಿಸಿದ್ದನ್ನು ಸಂಭ್ರಮಿಸುವ ಕ್ಷಣವೂ ಹೌದು. ಈ ಸಂಭ್ರಮಕ್ಕೀಗ ರಜತ ಸಂಭ್ರಮ.
ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರದೇಶವನ್ನು ಆಕ್ರಮಿಸುವ ಭಯೋತ್ಪಾದಕರ ಹಾಗೂ ಪಾಕಿಸ್ತಾನದ ಸೇನೆಯ ಕುತಂತ್ರದ ವಿರುದ್ಧ ಭಾರತೀಯ ಸೇನೆ ಘೋಷಿಸಿದ 'ಆಪರೇಷನ್ ವಿಜಯ್’ ಯಶಸ್ಸು ಸಾಧಿಸಿದ ದಿನವಾದ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ ಎಂದೇ ಆಚರಿಸಿಕೊಂಡು ಬರಲಾಗುತ್ತಿದ್ದು, ಇದಕ್ಕೆ ಈಗ 25 ವರ್ಷ. ವೀರ ಯೋಧರ ಬೆನ್ನಿಗೆ ನಿಂತ ಇಡೀ ದೇಶವೇ ಹೆಮ್ಮೆಯಿಂದ ನೆನೆಯುವ ದಿನವಾಗಿ ಪ್ರತಿ ವರ್ಷ ಕಾರ್ಗಿಲ್ ದಿವಸ ಆಚರಣೆಯಾಗುತ್ತಿದೆ.
1971ರಲ್ಲಿ ಬಾಂಗ್ಲಾ ವಿಮೋಚನೆ ಸಂದರ್ಭದಲ್ಲಿ ಪಾಕಿಸ್ತಾನ ಹಾಗೂ ಭಾರತ ನಡುವೆ ಭೀಕರ ಯುದ್ಧ ಸಂಭವಿಸಿತ್ತು. ಇದರಲ್ಲಿ ಪಾಕಿಸ್ತಾನ ಸೇನೆಯನ್ನು ಪರಾಭವಗೊಳಿಸುವ ಮೂಲಕ ಬಾಂಗ್ಲಾದೇಶ ಎಂಬ ರಾಷ್ಟ್ರದ ಉದಯಕ್ಕೆ ಭಾರತ ಕಾರಣವಾಗಿತ್ತು. ಇದಾಗಿ 28 ವರ್ಷಗಳ ನಂತರ ಕಾರ್ಗಿಲ್ ಯುದ್ಧ ಸಂಭವಿಸಲು, ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಪ್ರದೇಶಗಳಲ್ಲಿ ಭಯೋತ್ಫಾದಕರು ನುಸುಳುವಿಕೆ ಹಾಗೂ ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆಯೇ ಕಾರಣವಾಗಿತ್ತು.
ಸಿಯಾಚಿನ್ ನೀರ್ಗಲ್ಲು ಪ್ರದೇಶದ ಮೇಲೆ ತಮ್ಮ ಹಕ್ಕು ಸ್ಥಾಪಿಸಲು ಉಭಯ ರಾಷ್ಟ್ರಗಳ ಸೇನೆಗಳ ನಡುವೆ ಆಗಾಗ ಘರ್ಷಣೆಗಳು ನಡೆಯುತ್ತಲೇ ಇತ್ತು. ಈ ನಡುವೆ ಪರಸ್ಪರ ಶಾಂತಿ ನೆಲೆಸುವಂತೆ ಮಾಡಲು ದ್ವಿಪಕ್ಷೀಯ ಶಾಂತಿ ಮಾತುಕತೆಯು 1999ರಲ್ಲಿ ನಡೆಯಿತು. ಇದನ್ನು ಲಾಹೋರ್ ಘೋಷಣೆ ಎಂದೇ ಕರೆಯಲಾಗುತ್ತದೆ.
ಭಾರತಕ್ಕೆ ಸೇರಿದ ನಿಯಂತ್ರಣ ರೇಖೆಯನ್ನು ಅಕ್ರಮವಾಗಿ ದಾಟಿ ನುಸುಳಿ ಬಂದ ಪಾಕಿಸ್ತಾನದ ಸೇನೆ ಮತ್ತು ಭಯೋತ್ಪಾದಕರು, ಜಮ್ಮು ಮತ್ತು ಕಾಶ್ಮೀರದ ಉತ್ತರ ಭಾಗದ ಪರ್ವತ ಪ್ರದೇಶವಾದ ಕಾರ್ಗಿಲ್ ಜಿಲ್ಲೆಯನ್ನು ವಶಕ್ಕೆ ಪಡೆಯುವ ಯತ್ನ ನಡೆಸಿದ್ದರು. ಕಾಶ್ಮೀರ ಹಾಗೂ ಲಡಾಕ್ ನಡುವೆ ಸಂಪರ್ಕ ಕಲ್ಪಿಸುವ ಈ ಪ್ರದೇಶವನ್ನು ಆಕ್ರಮಿಸಿದ್ದು, ಉಭಯ ರಾಷ್ಟ್ರಗಳ ನಡುವೆ ಮತ್ತೆ ಒತ್ತಡ ಸೃಷ್ಟಿಸಿತ್ತು.
ಈ ಪರ್ವತ ಪ್ರದೇಶದಲ್ಲಿ ಚಳಿಗಾಲದಲ್ಲಿ ತಾಪಮಾನ ಮೈನಸ್ ಡಿಗ್ರಿ ಸೆಲ್ಸಿಯಸ್ ಇಳಿಯುತ್ತದೆ. ಇದರಿಂದ ಇಲ್ಲಿ ಗಡಿ ಕಾಯುವುದು ಸವಾಲಿನ ಕೆಲಸವಾದ್ದರಿಂದ ಭಾರತ ಹಾಗೂ ಪಾಕ್ ಸೈನಿಕರು ಇಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ. ಚಳಿಗಾಲ ಮುಗಿದ ನಂತರ ಮತ್ತೆ ಗಡಿ ಕಾಯಲು ಹೋಗುವುದು, ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ.
ಆದರೆ 1999ರಲ್ಲಿ ಈ ಅವಧಿಯನ್ನೇ ತಂತ್ರವನ್ನಾಗಿಸಿಕೊಂಡ ಪಾಕಿಸ್ತಾನ, ಕಾಶ್ಮೀರದ ಹೋರಾಟಗಾರರ ಹೆಸರಿನಲ್ಲಿ ಪಾಕ್ ಸೈನಿಕರು, ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತು.
ಪ್ರತಿಕೂಲ ಹವಾಮಾನ ಹಾಗೂ ಕಡಿದಾದ ಬೆಟ್ಟಗಳ ಸಾಲಿನಲ್ಲಿ ಭಾರತೀಯ ಸೇನೆಯ ವೀರ ಯೋಧರು ಸುಮಾರು ಎರಡು ತಿಂಗಳ ಕಾಲ ಹೋರಾಟ ನಡೆಸಿದರು. ಪಾಕಿಸ್ತಾನದ ನುಸುಳುಕೋರರನ್ನು ಸದೆಬಡಿದ ಭಾರತೀಯ ಸೇನೆ, ಅವರನ್ನು ಹಿಮ್ಮೆಟ್ಟುವಂತೆ ಮಾಡುವುದರ ಜತೆಗೆ, ಈ ಪ್ರದೇಶದ ಟೈಗರ್ ಹಿಲ್ ಹಾಗೂ ಇತರ ಪ್ರಮುಖ ಪ್ರದೇಶಗಳನ್ನು ಮರಳಿ ತನ್ನ ವಶಕ್ಕೆ ಪಡೆಯುವ ಮೂಲಕ ಆಪರೇಷನ್ ವಿಜಯ್ ಯಶಸ್ವಿಯಾಗಿ ಅಂತ್ಯಗೊಂಡಿತು.
ಕಾರ್ಗಿಲ್ ಯುದ್ಧ 1999ರ ಮೇನಲ್ಲಿ ಆರಂಭವಾಗಿ ಎರಡು ತಿಂಗಳ ಕಾಲ ನಡೆಯಿತು. ಅದೇ ವರ್ಷ ಜುಲೈ 26ರವರೆಗೂ ನಡೆದ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ 527 ಮಂದಿ ಭಾರತೀಯ ಯೋಧರು ಹುತಾತ್ಮರಾದರು.
ಯುದ್ಧದಲ್ಲಿ ಮಡಿದ ವೀರ ಯೋಧರನ್ನು ನೆನೆಯುವ ಸಲುವಾಗಿ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ ಎಂಬ ಹೆಸರಿನಡಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗಾಗಿ ಕರ್ನಾಟಕದ ಧಾರವಾಡದಲ್ಲಿ ಕಾರ್ಗಿಲ್ ಸ್ತೂಪವನ್ನೇ ನಿರ್ಮಿಸಲಾಗಿದೆ.
ಕಳೆದ 25 ವರ್ಷಗಳಿಂದ ಕರ್ಗಿಲ್ ವಿಜಯ ದಿವಸ್ ಎಂಬ ಕಾರ್ಯಕ್ರಮವು ದೇಶಭಕ್ತಿ ಹಾಗೂ ಭಾವೈಕ್ಯತೆಯ ಸಾಕ್ಷಿ ಎಂಬಂತೆ ಆಚರಿಸಲಾಗುತ್ತಿದೆ. ಕಾರ್ಗಿಲ್ ಯುದ್ಧವು ದೇಶದ ಪ್ರತಿಯೊಬ್ಬರನ್ನೂ ಒಗ್ಗೂಡಿಸಿದೆ. ಸೇನೆ ಕುರಿತು ದೇಶದ ಜನ ಹೆಮ್ಮೆ ಹಾಗೂ ಗೌರವ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಗಿಲ್ ವಿಜಯ ದಿವಸ ಆಚರಣೆಯಲ್ಲಿ ಸ್ಥಿತಿಸ್ಥಾಪಕತ್ವ ಹಾಗೂ ಒಗ್ಗಟ್ಟಿನ ಪ್ರದರ್ಶನದ ಮೂಲಕ ಇಡೀ ದೇಶವೇ ಹಮ್ಮೆಯ ಭಾವವನ್ನು ವ್ಯಕ್ತಪಡಿಸುತ್ತಿದೆ.
ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ವೀರ ಯೋಧರ ಸಾಹಸಗಾತೆಗಳು ಯುವಸಮುದಾಯಕ್ಕೆ ಪ್ರೇರಣೆಯಾಗಿವೆ. ಆ ಮೂಲಕ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದವರನ್ನು ಸದಾ ನೆನಪಿನಲ್ಲಿಡುವಂತೆ ಮಾಡಿದೆ. ಧೈರ್ಯ, ಏಕತೆ ಹಾಗೂ ದೇಶಭಕ್ತಿಯನ್ನು ಮತ್ತೊಮ್ಮೆ ಜಾಗೃತಗೊಳಿಸಿದ ವಿಜಯ ದಿವಸ್‌ನ ಬೆಳ್ಳಿ ಹಬ್ಬ ದೇಶದಾದ್ಯಂತ ಶುಕ್ರವಾರ (ಜುಲೈ 26) ಆಚರಿಸಲಾಗುತ್ತಿದೆ.
ಕಾರ್ಗಿಲ್ ವಿಜಯ ದಿವಸ್‌ನ 25ನೇ ವರ್ಷಾಚರಣೆಯ ರಾಷ್ಟ್ರೀಯ ಕಾರ್ಯಕ್ರಮ ಈ ಬಾರಿ ಲಡಾಕ್‌ನ ಡ್ರಾಸ್‌ನಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.