ADVERTISEMENT

ಪ್ರಧಾನಿ ಮೋದಿ ಅವರಿಂದ ಕ್ಷುಲ್ಲಕ ರಾಜಕೀಯ, ಅತ್ಯಂತ ದುರದೃಷ್ಟಕರ: ಖರ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2024, 10:04 IST
Last Updated 26 ಜುಲೈ 2024, 10:04 IST
<div class="paragraphs"><p>ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ </p></div>

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಚಿತ್ರ

ನವದೆಹಲಿ: ಕಾರ್ಗಿಲ್‌ ವಿಜಯ ದಿವಸದ ಅಂಗವಾಗಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಸಂದರ್ಭದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷುಲ್ಲಕ ರಾಜಕೀಯ ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಮತ್ತು ಶೋಚನೀಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಈವರೆಗೆ ಯಾವುದೇ ಪ್ರಧಾನ ಮಂತ್ರಿ ಈ ರೀತಿ ಮಾಡಿರಲಿಲ್ಲ. ಸೇನೆಯ ಕೋರಿಕೆಯ ಮೇರೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಮೋದಿ ಅವರು ಹೇಳುತ್ತಾರೆ. ಆದರೆ, ಇದು ಶುದ್ಧ ಸುಳ್ಳಾಗಿದೆ. ಇದು ನಮ್ಮ ಸೇನಾ ಪಡೆಯ ಕೆಚ್ಚೆದೆಯ ಯೋಧರಿಗೆ ಮಾಡುತ್ತಿರುವ ಅವಮಾನವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ರಧಾನಿ ಮೋದಿ ಅವರು ಸುಳ್ಳುಗಳನ್ನು ಹರಡುತ್ತಿದ್ದಾರೆ. ಅಗ್ನಿಪಥ ಯೋಜನೆಯ ಅಡಿಯಲ್ಲಿ ಶೇ 75ರಷ್ಟು ಅಗ್ನಿವೀರರನ್ನು ಖಾಯಂಗೊಳಿಸಲಾಗುತ್ತದೆ. ಶೇ 25ರಷ್ಟು ಅಗ್ನಿವೀರರು 4 ವರ್ಷಗಳ ಬಳಿಕೆ ಸೇನೆಯಿಂದ ನಿವೃತ್ತರಾಗುತ್ತಾರೆ ಎಂದು ನಿವೃತ್ತ ಸೇನಾ ಜನರಲ್‌ ಮುಖ್ಯಸ್ಥ ಎಂ. ಎಂ ನರಾವಣೆ ಅವರು ದಾಖಲೆಯೊಂದರಲ್ಲಿ ತಿಳಿಸಿದ್ದಾರೆ. ಆದರೆ, ಮೋದಿ ನೇತೃತ್ವದ ಸರ್ಕಾರ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಸೇನೆಯ ಮೂರು ಪಡೆಗಳಲ್ಲೂ ಬಲವಂತವಾಗಿ ಅಗ್ನಿಪಥ ಯೋಜನೆಯನ್ನು ಜಾರಿಗೊಳಿಸಿದೆ’ ಎಂದು ಖರ್ಗೆ ಆರೋಪಿಸಿದ್ದಾರೆ.

‘ಕೇವಲ 6 ತಿಂಗಳ ತರಬೇತಿಯಿಂದ ವೃತ್ತಿಪರ ಸೈನಿಕರನ್ನು ನಾವು ಸಿದ್ಧಗೊಳಿಸುತ್ತಿದ್ದೇವೆಯೇ? ಸೈನಿಕರು ದೇಶಾಭಿಮಾನದಿಂದ ಸೇನೆಗೆ ಸೇರುತ್ತಾರೆಯೇ ಹೊರತು ಜೀವನೋಪಾಯಕ್ಕೆ ಹಣ ಸಂಪಾದಿಸಲು ಅಲ್ಲ. ಅಗ್ನಿಪಥ ಯೋಜನೆಯನ್ನು ಹಲವು ನಿವೃತ್ತ ಸೇನಾಧಿಕಾರಿಗಳು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ, ಈ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಇದೆಲ್ಲವೂ ದಾಖಲೆಯಲ್ಲಿದೆ’ ಎಂದು ಖರ್ಗೆ ಹೇಳಿದ್ದಾರೆ.

ಅಗ್ನಿವೀರರಿಗೆ ಪಿಂಚಣಿ, ಗ್ರಾಚ್ಯುಟಿ, ಪ್ರೋತ್ಸಾಹ ಧನ, ಕುಟುಂಬ ಪಿಂಚಣಿ ಮತ್ತು ಅವರ ಮಕ್ಕಳಿಗೆ ಶೈಕ್ಷಣಿಕ ಭತ್ಯೆ ಯಾವುದೇ ಸೌಲಭ್ಯವಿಲ್ಲ. ಪ್ರಧಾನಿ ಮೋದಿ ಅವರೇ, ಈವರೆಗೆ 15 ಅಗ್ನಿವೀರರು ಹುತಾತ್ಮರಾಗಿದ್ದಾರೆ. ಅದನ್ನಾದರೂ ಗೌರವಿಸಿ ಎಂದು ಖರ್ಗೆ ತಿಳಿಸಿದ್ದಾರೆ.

ಅಗ್ನಿಪಥ ಯೋಜನೆ ಕುರಿತು ದೇಶದ ಯುವಕರಲ್ಲಿ ಆಕ್ರೋಶ ಮತ್ತು ತೀವ್ರ ವಿರೋಧವಿದೆ. ಈ ಯೋಜನೆಯನ್ನು ರದ್ದುಗೊಳಿಸಬೇಕೆಂದು ಕಾಂಗ್ರೆಸ್ ಪಕ್ಷ ನಿರಂತರವಾಗಿ ಒತ್ತಾಯಿಸುತ್ತಲೇ ಇದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.