ಮುಖ್ಯಮಂತ್ರಿ ಆಯ್ಕೆಗೆ ಕಾಂಗ್ರೆಸ್‌ನಲ್ಲಿ ಕಸರತ್ತು, ಡಿಕೆ ಶಿವಕುಮಾರ್ ಅವರನ್ನೇ ಮುಖ್ಯಮಂತ್ರಿ ಮಾಡಿ ಎಂದು ಒಕ್ಕಲಿಗ ಮಠಾಧೀಶರ ಆಗ್ರಹ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲೆಂದು ಬೆಂಬಲಿಗರ ಆಗ್ರಹ ಸೇರಿ ಈ ದಿನ ಪ್ರಮುಖ ಸುದ್ದಿಗಳು
ಬೆಂಗಳೂರು: ‘ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕರ (ಸಿಎಲ್‌ಪಿ) ಸಭೆ ಭಾನುವಾರ ಸಂಜೆ 6.30ಕ್ಕೆ ಆರಂಭವಾಗಿದೆ.
‘ಸಿಎಲ್‌ಪಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಆಯ್ಕೆಯಾದ ನಾಯಕ ನೂತನ ಮುಖ್ಯಮಂತ್ರಿಯಾಗಿ ಸೋಮವಾರ (ಮೇ 15) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೊತೆಗೆ, ಅಂದೇ ನೂತನ ಸಚಿವರ ಪ್ರಮಾಣವಚನವೂ ನಡೆಯುವ ಸಾಧ್ಯತೆಯಿದೆ’ ಎಂದು ಮೂಲಗಳು ತಿಳಿಸಿವೆ.
ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಆಯ್ಕೆಯಾಗುವ ಸಾಧ್ಯತೆ ಇದೆ. ಮೂರು ಉಪ ಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಿ, ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ, ದಲಿತ ಸಮುದಾಯದ ಜಿ. ಪರಮೇಶ್ವರ ಅಥವಾ ಕೆ.ಎಚ್. ಮುನಿಯಪ್ಪ, ಒಕ್ಕಲಿಗ ಸಮುದಾಯದಿಂದ ಡಿ.ಕೆ. ಶಿವಕುಮಾರ್ ಅವರಿಗೆ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ. ದಲಿತ ಸಮುದಾಯದಿಂದ ಪರಮೇಶ್ವರ ಅವರಿಗೆ ಉಪ ಮುಖ್ಯಮಂತ್ರಿ ನೀಡಲು ವರಿಷ್ಠರು ಒಲವು ಹೊಂದಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ‘ಪಕ್ಷವು ಸಂಕಷ್ಟದಲ್ಲಿದ್ದಾಗ ಹಗಲು ರಾತ್ರಿ ಎನ್ನದೇ ಸಂಘಟಿಸಿ ಅಧಿಕಾರಕ್ಕೆ ತಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನೇ ಮುಖ್ಯಮಂತ್ರಿ ಮಾಡಬೇಕು’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪಟ್ಟನಾಯಕನಹಳ್ಳಿಯ ಸ್ಫಟಿಕಪುರಿ ಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಆಗ್ರಹಿಸಿದರು.
ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಭಾನುವಾರ ನಡೆದ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಸಭೆಯ ಬಳಿಕ, ‘ಚುನಾವಣೆಗಳಲ್ಲಿ ಕಾಂಗ್ರೆಸ್ ಬಹುಮತ ಪಡೆದಾಗ ಕೆಪಿಸಿಸಿ ಅಧ್ಯಕ್ಷರೇ ಮುಖ್ಯಮಂತ್ರಿ ಆಗುವ ಸಂಪ್ರದಾಯ ಇದೆ. ಅದನ್ನು ಈಗಲೂ ಪಾಲಿಸುವಂತೆ ಆಗಲಿ. ಆ ಸಂಪ್ರದಾಯ ಮುರಿಯಬಾರದು’ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಮನವಿ ಮಾಡಿದರು.
ಪೂರ್ತಿ ಓದಿ: ಡಿಕೆಶಿ ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಒಕ್ಕಲಿಗ ಮಠಾಧೀಶರ ಆಗ್ರಹ
ಹೊಸಪೇಟೆ: ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಕಂಡಿರುವ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ಹಿರಿಯ ಮಗಳಾದ ಲತಾ ಭಾನುವಾರ ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿಯಾಗಿ ಬೆಂಬಲ ಸೂಚಿಸಿದ್ದಾರೆ.
ಪೂರ್ತಿ ಓದಿ: ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ ಎಂ.ಪಿ. ಪ್ರಕಾಶ್ ಮಗಳು ಲತಾ
ಬೆಂಗಳೂರು: ಕಾಂಗ್ರೆಸ್‌ನ ಮುಖ್ಯಮಂತ್ರಿ ಆಕಾಂಕ್ಷಿಗಳಾದ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಭಾಶಯ ತಿಳಿಸಿದ್ದಾರೆ.
ಭಾನುವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ ಇಡೀ ದೇಶದಲ್ಲಿ ಸೋತಿದೆ. ಇದು ಮೋದಿಯವರ ಸೋಲಲ್ಲ. ಮೋದಿಯವರು ಕೇವಲ ಇಲ್ಲಿ ಪ್ರಚಾರಕ್ಕೆ ಬಂದಿದ್ದರು ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಪೂರ್ತಿ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ಗೆ ಆಲ್ ದಿ ಬೆಸ್ಟ್ ಎಂದ ಹಂಗಾಮಿ ಸಿಎಂ ಬೊಮ್ಮಾಯಿ
ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷದಿಂದ ನೂತನ ಸಿಎಂ ಆಯ್ಕೆಗೆ ಸಂಜೆ 5.30ಕ್ಕೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಐಸಿಸಿಯಿಂದ ಮೂವರು ವೀಕ್ಷಕರನ್ನು ನೇಮಕ ಮಾಡಲಾಗಿದೆ.
ಕಾಂಗ್ರೆಸ್‌ನ ಹಿರಿಯ ನಾಯಕ ಸುಶೀಲ್ ಕುಮಾರ್ ಶಿಂಧೆ, ಪ್ರಧಾನ ಕಾರ್ಯದರ್ಶಿ ಜಿತೇಂದರ್ ಸಿಂಗ್, ಎಐಸಿಸಿಯ ಮಾಜಿ ಪ್ರಧಾನ ಕಾರ್ಯದರ್ಶಿ ದೀಪಕ್ ಬಾಬರಿಯಾ ಅವರನ್ನು ವೀಕ್ಷಕರಾಗಿ ನೇಮಕ ಮಾಡಲಾಗಿದೆ.
ಪೂರ್ತಿ ಓದಿ: ಸಿಎಲ್‌ಪಿ ಸಭೆ: ಎಐಸಿಸಿಯಿಂದ ಮೂವರು ವೀಕ್ಷಕರ ನೇಮಕ
ನವದೆಹಲಿ: ಒಂದು ವೇಳೆ ಈಗ ವಿರೋಧ ಪಕ್ಷಗಳು ಒಂದಾಗದಿದ್ದರೆ ದೇಶದ ಜನ ಯಾವತ್ತೂ ಕ್ಷಮಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಹೇಳಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳು ಒಂದಾದರೆ ಬಿಜೆಪಿ ಅಧಿಕಾರದಲ್ಲಿ ಇರುವುದಿಲ್ಲ ಎಂದು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ಕರ್ನಾಟಕ ಚುನಾವಣೆ ಬಳಿಕ, ದೇಶದಾದ್ಯಂತ ಒಂದು ಅಲೆ ಪ್ರಾರಂಭವಾಗಿದೆ. ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ದಿನಗಳು ಮುಗಿಯುತ್ತಿವೆ ಎಂದು ಜನ ಹೇಳಲು ಶುರು ಮಾಡಿದ್ದಾರೆ. ಒಂದು ವೇಳೆ ಈಗ ವಿರೋಧ ಪಕ್ಷಗಳು ಒಂದಾಗದಿದ್ದರೆ ದೇಶದ ಜನ ಎಂದೂ ನಮ್ಮನ್ನು ಕ್ಷಮಿಸಲಾರರು ಎಂದು ಅವರು ಹೇಳಿದರು.
ಪೂರ್ತಿ ಓದಿ: ವಿರೋಧ ಪಕ್ಷಗಳು ಒಂದಾಗದಿದ್ದರೆ ದೇಶದ ಜನ ಕ್ಷಮಿಸಲಾರರು: ಅಧೀರ್ ರಂಜನ್ ಚೌಧರಿ
ಬೆಂಗಳೂರು: ಕೇಂದ್ರೀಯ ತನಿಖಾ ದಳದ (ಸಿಬಿಐ) ನೂತನ ನಿರ್ದೇಶಕರಾಗಿ ರಾಜ್ಯದ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಪ್ರವೀಣ್ ಸೂದ್ ಅವರು ನೇಮಕಗೊಂಡಿದ್ದಾರೆ.
ಮೇ ಕೊನೆಯ ವಾರದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ನೇಮಕ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಪ್ರವೀಣ್ ಸೂದ್, ‘ಇದು ಅನಿರೀಕ್ಷಿತ ನೇಮಕ. ಕೊಟ್ಟ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತೇನೆ. ಸದ್ಯದ ನಿರ್ದೇಶಕರ ಅಧಿಕಾರ ಅವಧಿ ಮೇ 25ಕ್ಕೆ ಮುಗಿಯಲಿದೆ. ಅದಾದ ನಂತರ ದೆಹಲಿಗೆ ಹೋಗಿ ಅಧಿಕಾರ ಸ್ವೀಕರಿಸುತ್ತೇನೆ’ ಎಂದರು.
ಪೂರ್ತಿ ಓದಿ: ಸಿಬಿಐ ನಿರ್ದೇಶಕರಾಗಿ ಮೇ ಕೊನೆ ವಾರದಲ್ಲಿ ಅಧಿಕಾರ ಸ್ವೀಕಾರ: ಪ್ರವೀಣ್ ಸೂದ್
ನವದೆಹಲಿ: ‘ಭಾರತೀಯ ನೌಕಾಪಡೆ ನಡೆಸಿದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯು ಯಶಸ್ವಿಯಾಗಿದೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ನೌಕಾಪಡೆಯು ಯಾವ ಸ್ಥಳದಿಂದ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಸಿದೆ ಎಂಬುದು ಗೊತ್ತಾಗಿಲ್ಲ.
ಪೂರ್ತಿ ಓದಿ: ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿ
ಶ್ರೀನಗರ : ಜಮ್ಮು–ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರ ಅಡಗುದಾಣವನ್ನು ಭದ್ರತಾ ಪಡೆಗಳು ಭಾನುವಾರ ಹೊಡೆದುರುಳಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರರು ಅಡಗಿ ಕುಳಿತ ಖಚಿತ ಮಾಹಿತಿ ಮೇರೆಗೆ ಅಂದಾನ್ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ವೇಳೆ ಉಗ್ರರು ಭದ್ರತಾ ಪಡೆ ಮೇಲೆ ಗುಂಡಿನ ದಾಳಿ ಆರಂಭಿಸಿದರು. ಭದ್ರತಾ ಪಡೆಗಳೂ ಪ್ರತಿದಾಳಿ ನಡೆಸಿದವು. ಬಳಿಕ ಉಗ್ರರು ಪರಾರಿಯಾದರು. ಸ್ಥಳದಲ್ಲಿ ಶೋಧ ನಡೆಸಿದಾಗ ಗುಹೆಯ ರೀತಿಯ ಅಡಗುದಾಣ ಪತ್ತೆಯಾಗಿದ್ದು, ಅದರೊಳಗೆ ಬೆಡ್‌ಶೀಟ್ ಮತ್ತಿತರ ವಸ್ತುಗಳು ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಲ್ಲುಪುರಂ (ತಮಿಳುನಾಡು): ‘ರಾಜ್ಯದ ಮರಕ್ಕನಂ ತಾಲ್ಲೂಕಿನ ಇಕ್ಕಿಯಾಕುಪ್ಪಂನಲ್ಲಿ ಶನಿವಾರ ರಾತ್ರಿ ವಿಷಯುಕ್ತ ಮದ್ಯ ಕುಡಿದು ಮೂವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
‘ಪ್ರಕರಣ ಸಂಬಂಧಿಸಿ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ.
ವಿಷಯುಕ್ತ ಮದ್ಯ ಕುಡಿದು ಇನ್ನಿಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಪುದುಚೆರಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರ ಕುಟುಂಬಕ್ಕೆ ತಲಾ ₹10 ಲಕ್ಷ ಹಾಗೂ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ ₹50 ಸಾವಿರವನ್ನು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದ್ದಾರೆ. ಮೃತರು ಸುಮಾರು 45ರಿಂದ 55 ವರ್ಷದವರಾಗಿದ್ದಾರೆ.
ಪೂರ್ತಿ ಓದಿ: ವಿಷಯುಕ್ತ ಮದ್ಯ ಕುಡಿದು ಮೂವರ ಸಾವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.