ನವದೆಹಲಿ: ಇಲ್ಲಿರುವ ಕರ್ನಾಟಕ ಭವನದ ಎದುರು ಭದ್ರತಾ ವ್ಯವಸ್ಥೆ ಬಿಗಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಖಾಸಗಿ ಏಜೆನ್ಸಿಯ ಭದ್ರತಾ ಸಿಬ್ಬಂದಿ ಬದಲು ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಿದೆ.
ಕೌಟಿಲ್ಯ ಮಾರ್ಗದಲ್ಲಿರುವ ಕರ್ನಾಟಕ ಭವನ–1ರಲ್ಲಿ ಇತ್ತೀಚೆಗೆ ನಡೆದಿದ್ದ ಗಲಾಟೆ ಪ್ರಕರಣದ ಕುರಿತು ನಿವಾಸಿ ಆಯುಕ್ತ ನಿಲಯ್ ಮಿತಾಶ್ ಅವರು ಪರಿಶೀಲನೆ ನಡೆಸಿ ಸಲ್ಲಿಸಿರುವ ವರದಿಯನ್ನು ಆಧರಿಸಿ ಭದ್ರತಾ ವ್ಯವಸ್ಥೆ ಬದಲಿಸುವ ತೀರ್ಮಾನ ಕೈಗೊಳ್ಳಲಾಗಿದೆ.
ವಿವಿಧ ಕೆಲಸ– ಕಾರ್ಯಗಳಿಗಾಗಿ ರಾಜ್ಯದಿಂದ ಬರುವ ಮುಖ್ಯಮಂತ್ರಿ, ರಾಜ್ಯಪಾಲರು, ಸಚಿವರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಅತಿಗಣ್ಯ ಅತಿಥಿಗಳ ಭದ್ರತಾ ವ್ಯವಸ್ಥೆಯಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆ ಭವನಕ್ಕೆ ಬರುವ ಪ್ರತಿಯೊಬ್ಬರ ಮಾಹಿತಿ ಪಡೆಯಲು ಸೂಚಿಸಲಾಗಿದೆ ಎಂದು ಭವನದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಭವನ–1ರಲ್ಲಿ ಕಳೆದ ಮೂರು ದಿನಗಳಿಂದಲೇ ಕೆಎಸ್‌ಆರ್‌ಪಿಯ 15 ಜನ ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಸರ್ದಾರ್ ಪಟೇಲ್ ಮಾರ್ಗ ಮತ್ತು ಸಿರಿ ಪೋರ್ಟ್ ಬಳಿ ಇರುವ ಇತರ ಎರಡು ಭವನಗಳೆದುರು 17 ಮಂದಿ ಪೊಲೀಸ್ ಸಿಬ್ಬಂದಿಯ ತಂಡ ಕೆಲವೇ ದಿನಗಳಲ್ಲಿ ರಾಜ್ಯದಿಂದ ರಾಷ್ಟ್ರ ರಾಜಧಾನಿಗೆ ಬರಲಿದೆ.
ಮೀಸಲು ಪಡೆ ಸಿಬ್ಬಂದಿಯು ವಿಭಿನ್ನ ಹವಾಗುಣ ಅರಿತು ಕಾರ್ಯ ನಿರ್ವಹಿಸುವಂತಾಗಲು ಹಾಗೂ ಭದ್ರತಾ ವ್ಯವಸ್ಥೆಯ ವಿವಿಧ ಮಜಲುಗಳನ್ನು ಅರಿಯಲು ಇದರಿಂದ ಅನುಕೂಲವಾಗಲಿದೆ ಎಂದು ಕೆಎಸ್‌ಆರ್‌ಪಿಯ ಹೆಚ್ಚುವರಿ ಮಹಾ ನಿರ್ದೇಶಕ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಇಲ್ಲಿ ನಿಯುಕ್ತರಾದ ಸಿಬ್ಬಂದಿಯು ಮೂರು ತಿಂಗಳುಗಳ ಕಾಲ ಕಾರ್ಯ ನಿರ್ವಹಿಸಬೇಕಾಗುತ್ತದೆ. ಬೇರೊಂದು ತಂಡ ಬಂದ ನಂತರ ಅವರನ್ನು ವಾಪಸ್ ರಾಜ್ಯಕ್ಕೆ ಕಳುಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಗುಜರಾತ್, ತಮಿಳುನಾಡು, ರಾಜಸ್ಥಾನ ಮತ್ತು ಜಮ್ಮು– ಕಾಶ್ಮೀರ ಭವನಗಳೆದುರು ಕೆಲವು ವರ್ಷಗಳಿಂದ ಆಯಾ ರಾಜ್ಯಗಳ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯನ್ನೇ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ರಾಜ್ಯ ಸರ್ಕಾರವೂ ಅದೇ ಮಾದರಿ ಅನುಸರಿಸಲು ಮುಂದಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೆಲವು ಸದಸ್ಯರು ಕಳೆದ ಫೆಬ್ರುವರಿ 6ರಂದು ಮಧ್ಯರಾತ್ರಿ ವೇಳೆ ಮದ್ಯ ಸೇವಿಸಿ ಗಲಾಟೆ ಮಾಡಿದ್ದರಿಂದ, ಪಕ್ಕದ ಕೊಠಡಿಯಲ್ಲಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು.
ಒಮ್ಮೆ ಎಚ್ಚರಿಕೆ ನೀಡಿದರೂ ಗಲಾಟೆ ಹೆಚ್ಚುತ್ತಲೇ ಸಾಗಿದ್ದರಿಂದ ಆಕ್ರೋಶಗೊಂಡ ನ್ಯಾಯಮೂರ್ತಿಗಳು ಸಮೀಪದ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದರು. ಪ್ರಾಧಿಕಾರದ ಅಧ್ಯಕ್ಷರು ಮತ್ತು ನಿವಾಸಿ ಆಯುಕ್ತರು ಲಿಖಿತ ದೂರು ನೀಡದಂತೆ ಕೋರಿಕೊಂಡು ಪರಿಸ್ಥಿತಿ ತಿಳಿಗೊಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.