ADVERTISEMENT

ಹಿಜಾಬ್ ವಿವಾದ ಕುರಿತ ವಿಚಾರಣೆ ಸುಪ್ರೀಂನಲ್ಲಿ ಬಾಕಿ ಇದೆ: ರಣದೀಪ್ ಸುರ್ಜೇವಾಲ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 12:54 IST
Last Updated 15 ಮಾರ್ಚ್ 2022, 12:54 IST
ರಣದೀಪ್ ಸುರ್ಜೇವಾಲ
ರಣದೀಪ್ ಸುರ್ಜೇವಾಲ   

ನವದೆಹಲಿ: ಹಿಜಾಬ್ ವಿವಾದದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇದೆ. ತೀರ್ಪು ಪ್ರಕಟವಾಗುವವರೆಗೂ ಎಲ್ಲರೂ ಕಾದುನೋಡಬೇಕು ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲ ಟ್ವೀಟ್ ಮಾಡಿದ್ಧಾರೆ.

ಹಿಜಾಬ್ ವಿವಾದ ಕುರಿತಂತೆ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ್ದು, ಹೆಣ್ಣು ಮಕ್ಕಳ ಶಿಕ್ಷಣ ಖಚಿತಪಡಿಸುವುದು, ಶಿಕ್ಷಣ ಸಂಸ್ಥೆಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಹೊಣೆ ಬೊಮ್ಮಾಯಿ ಸರ್ಕಾರದ ಮೇಲಿದೆ ಎಂದು ಅವರು ಹೇಳಿದ್ದಾರೆ.

ಹಿಜಾಬ್ ವಿವಾದದ ಕುರಿತಂತೆ ಇಂದು(ಮಾರ್ಚ್ 15) ಬೆಳಗ್ಗೆ ತೀರ್ಪು ಪ್ರಕಟಿಸಿದ ಹೈಕೋರ್ಟ್, ಕಾಲೇಜು ತರಗತಿಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ನಿರ್ದೇಶಿಸಬೇಕು ಎಂದು ಕೋರಿದ್ದ ಎಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಈ ವಿಷಯವನ್ನು ದೇಶದಾದ್ಯಂತ ವಿವಾದದ ವಿಷಯವನ್ನಾಗಿ ಮಾಡಿರುವ ಹಿಂದೆ ಕಾಣದ ಕೈಗಳು ಅಡಗಿವೆ’ ಎಂಬ ಬಲವಾದ ಸಂಶಯ ವ್ಯಕ್ತಪಡಿಸಿದೆ.

ADVERTISEMENT

‘ಹಿಜಾಬ್ ಇಸ್ಲಾಂನ ಅತ್ಯಾವಶ್ಯಕ ಧಾರ್ಮಿಕ ಆಚರಣೆ (ಇಆರ್‌ಪಿ) ಎಂಬುದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲವಾಗಿದ್ದಾರೆ. ಅಂತೆಯೇ ಇಸ್ಲಾಂ ಧರ್ಮದ ಅನುಸಾರ ಹಿಜಾಬ್ ಅತ್ಯಾವಶ್ಯಕ ಆಚರಣೆ ಎಂಬ ಉಲ್ಲೇಖಕ್ಕೆ ಕುರಾನಿನಲ್ಲಿ ಯಾವುದೇ ಅಧಿಕೃತ ಆಧಾರವಿಲ್ಲ’ಎಂದು ನ್ಯಾಯಪೀಠದ ಮೂವರೂ ಸದಸ್ಯರು ಸಂಪೂರ್ಣ ಸಹಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯಾವುದೇ ವ್ಯಕ್ತಿ ಅಥವಾ ಭಜರಂಗದಳ, ಎಸ್‌ಡಿಪಿಐ, ಪಿಎಫ್‌ಐ ಯಾವುದೇ ಧಾರ್ಮಿಕ ಸಂಘಟನೆಗಳಾಗಿದ್ದರೂ ಸಹ ಕರ್ನಾಟಕದ ಶಾಲೆ ಮತ್ತು ಕಾಲೇಜುಗಳಲ್ಲಿ ವಾತಾವರಣ ಕೆಡಿಸದಂತೆ ನೋಡಿಕೊಳ್ಳಬೇಕು. ಯಾವುದೇ ಧರ್ಮದ ಹೆಣ್ಣುಮಕ್ಕಳು ಶಾಲೆ ಮತ್ತು ಕಾಲೇಜುಗಳಿಗೆ ಹೋಗುವದನ್ನು ಖಚಿತಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಎಲ್ಲಾ ಮಕ್ಕಳಿಗೆ ವೈಜ್ಞಾನಿಕ ಮತ್ತು ಆಧುನಿಕ ಶಿಕ್ಷಣವನ್ನು ನೀಡುವ ‘ಧರ್ಮ’ವನ್ನು ರಾಜಕೀಯ ಲಾಭಕ್ಕಾಗಿ ಕೈಬಿಡಬಾರದು. ಕೋಮುವಾದದ ನೆಲೆಯಲ್ಲಿ ರಾಜ್ಯವನ್ನು ಧ್ರುವೀಕರಣಗೊಳಿಸುವ ಬಿಜೆಪಿಯ ಅಜೆಂಡಾಕ್ಕೆ ಶಾಂತಿಯುತ ವಾತಾವರಣ ಮತ್ತು ಕೋಮು ಸೌಹಾರ್ದವನ್ನು ಬಲಿಕೊಡಬಾರದು ಎಂದಿದ್ಧಾರೆ.

ಇವುಗಳನ್ನೂ ಓದಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.