ಪಣಜಿ: ಕರ್ನಾಟಕವು ಮಹದಾಯಿ ನದಿಗೆ ಅಣೆಕಟ್ಟೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಇದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಲಿದೆ. ಹೀಗಾಗಿ ಈ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಕಾಂಗ್ರೆಸ್‌ನ ಗೋವಾ ಘಟಕ ರಾಜ್ಯಪಾಲರಿಗೆ ಮಂಗಳವಾರ ಮನವಿ ಮಾಡಿದೆ.
ರಾಜ್ಯಪಾಲ ಶ್ರೀಧರನ್ ಪಿಳ್ಳೈ ಅವರನ್ನು ಭೇಟಿ ಮಾಡಿದ ಪಕ್ಷದ ಗೋವಾ ಘಟಕದ ಅಧ್ಯಕ್ಷ ಅಮಿತ್ ಪಾಟ್ಕರ್ ನೇತೃತ್ವದ ನಿಯೋಗ, ಕರ್ನಾಟಕದಲ್ಲಿ ಉದ್ದೇಶಿತ ಅಣೆಕಟ್ಟುಗಳ ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡುವಂತೆ ಅವರನ್ನು ಒತ್ತಾಯಿಸಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟ್ಕರ್, ‘ಮಹದಾಯಿ ನದಿ ನೀರು ಬಳಕೆಗೆ ಸಂಬಂಧಿಸಿ ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಗೋವಾ ಸರ್ಕಾರ ವಿಫಲವಾಗಿದೆ ಎಂಬ ರಾಜ್ಯದ ಜನತೆಯ ಆತಂಕವನ್ನು ರಾಜ್ಯಪಾಲರಿಗೆ ವಿವರಿಸಿದ್ದೇವೆ’ ಎಂದು ಹೇಳಿದರು.
‘ಮಹದಾಯಿ ನದಿ ಪಾತ್ರದಿಂದ ನೀರನ್ನು ತಿರುಗಿಸುವ ಉದ್ದೇಶದೊಂದಿಗೆ ಕರ್ನಾಟಕವು ಅಣೆಕಟ್ಟುಗಳನ್ನು ನಿರ್ಮಿಸಲು ಮುಂದಾಗಿದೆ. ಕರ್ನಾಟಕದ ಈ ನಡೆ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿದ್ದರೂ ಗೋವಾ ಸರ್ಕಾರ ಮೂಕ ಪ್ರೇಕ್ಷಕನಂತೆ ಕೂತಿದೆ’ ಎಂದು ಕಾಂಗ್ರೆಸ್ ಮನವಿ ಪತ್ರದಲ್ಲಿ ದೂರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.