ADVERTISEMENT

ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಆಗುವರೇ ಕರ್ನಾಟಕ ಹೈಕೋರ್ಟ್‌ನ ಬಿ.ವಿ.ನಾಗರತ್ನ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಆಗಸ್ಟ್ 2021, 5:03 IST
Last Updated 18 ಆಗಸ್ಟ್ 2021, 5:03 IST
ನ್ಯಾಯಮೂರ್ತಿ ಬಿ.ವಿ.ನಾಗರತ್ನ, ಚಿತ್ರ ಕೃ‍ಪೆ: ಕರ್ನಾಟಕ ಜುಡಿಶಿಯರಿ ವೆಬ್‌ಸೈಟ್‌
ನ್ಯಾಯಮೂರ್ತಿ ಬಿ.ವಿ.ನಾಗರತ್ನ, ಚಿತ್ರ ಕೃ‍ಪೆ: ಕರ್ನಾಟಕ ಜುಡಿಶಿಯರಿ ವೆಬ್‌ಸೈಟ್‌   

ನವದೆಹಲಿ: ಭಾರತದ ಸುಪ್ರೀಂ ಕೋರ್ಟ್‌ 2027ರಲ್ಲಿ ಮೊದಲ ಬಾರಿಗೆ ಮಹಿಳಾ ಮುಖ್ಯ ನ್ಯಾಯಮೂರ್ತಿಯನ್ನು ಕಾಣಲಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಭಾರತದ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ, ನ್ಯಾಯಮೂರ್ತಿಗಳ ನೇಮಕಕ್ಕಾಗಿ ಒಟ್ಟು ಒಂಬತ್ತು ಜನರ ಹೆಸರನ್ನು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಒಂಬತ್ತು ಜನರಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಅವರು, ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಗುಜರಾತ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಬೆಲಾ ತ್ರಿವೇದಿ.

ADVERTISEMENT

ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಒಂಬತ್ತು ನ್ಯಾಯಮೂರ್ತಿಗಳ ಸ್ಥಾನ ಖಾಲಿ ಇದೆ. ಇಂದು ನ್ಯಾಯಮೂರ್ತಿ ನವಿನ್‌ ಸಿನ್ಹಾ ನಿವೃತ್ತರಾಗಲಿದ್ದು, ಖಾಲಿ ಇರುವ ಸ್ಥಾನಗಳ ಸಂಖ್ಯೆ 10ಕ್ಕೆ ಹೆಚ್ಚಳವಾಗಲಿದೆ.

ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿರುವ ಇತರೆ ಹೆಸರುಗಳು: ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎಸ್‌.ಓಕಾ, ಗುಜರಾತ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ ನಾಥ್‌, ಸಿಕ್ಕಿಂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ, ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್‌, ಮದ್ರಾಸ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ಎಂ.ಸುಂದರೇಶ್‌ ಹಾಗೂ ಹಿರಿಯ ಅಡ್ವೊಕೇಟ್‌ ಪಿ.ಸಿ.ನರಸಿಂಹ.

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಬಿ.ವಿ.ನಾಗರತ್ನ

1987ರಲ್ಲಿ ಬೆಂಗಳೂರಿನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ನಾಗರತ್ನ ಅವರು 2008ರ ಫೆಬ್ರುವರಿಯಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಎರಡು ವರ್ಷಗಳ ನಂತರ ಅವರಿಗೆ ನ್ಯಾಯಮೂರ್ತಿ ಸ್ಥಾನ ಕಾಯಂ ಮಾಡಲಾಯಿತು.

ನ್ಯಾಯಮೂರ್ತಿ ನಾಗರತ್ನ ಅವರ ತಂದೆ ಇ.ಎಸ್‌.ವೆಂಕಟರಾಮಯ್ಯ ಅವರು 1989ರಲ್ಲಿ ಆರು ತಿಂಗಳು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅವರು ಮಂಡ್ಯದ ಪಾಂಡವಪುರ ಮೂಲದವರು.

ಸುಪ್ರೀಂ ಕೋರ್ಟ್‌ ಶಿಫಾರಸಿಗೆ ಕೇಂದ್ರ ಸರ್ಕಾರದಿಂದ ಸಮ್ಮತಿ ದೊರೆತರೆ, ನಾಗರತ್ನ ಅವರು 2027ರಲ್ಲಿ ಅಲ್ಪಾವಧಿಗೆ ಮುಖ್ಯ ನ್ಯಾಯಮೂರ್ತಿಯಾಗಿ ಹೊಣೆ ನಿರ್ವಹಿಸುತ್ತಾರೆ ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

2009ರ ನವೆಂಬರ್‌ನಲ್ಲಿ ಪ್ರತಿಭಟನಾ ನಿರತ ವಕೀಲರ ಗುಂಪು, ನಾಗರತ್ನ ಹಾಗೂ ಕರ್ನಾಟಕ ಹೈಕೋರ್ಟ್‌ನ ಇತರೆ ಇಬ್ಬರು ನ್ಯಾಯಮೂರ್ತಿಗಳನ್ನು ಕೋರ್ಟ್‌ ರೂಂನೊಳಗೆ ಸೇರಿಸಿ ಬಾಗಿಲು ಮುಚ್ಚಿದ್ದರು. ಪರಿಸ್ಥಿತಿಯನ್ನು ಧೈರ್ಯದಿಂದ ನಿಭಾಯಿಸಿದ ನಾಗರತ್ನ, 'ನಮಗೆ ಕೋಪ ಬರಲಿಲ್ಲ, ಆದರೆ ವಕೀಲರಿಂದ ನಮಗೆ ಹೀಗೆ ಆಗಿದ್ದು ಬೇಸರ ತರಿಸಿದೆ. ಅಪಮಾನದಿಂದ ನಾವು ನಮ್ಮ ತಲೆ ತಗ್ಗಿಸಬೇಕಿದೆ' ಎಂದು ಪ್ರತಿಕ್ರಿಯಿಸಿದ್ದರು.

ವಿದ್ಯುನ್ಮಾನ ಮಾಧ್ಯಮಗಳಿಗೆ ನಿಯಂತ್ರಣದ ಅವಶ್ಯತೆಯ ಕುರಿತು ನ್ಯಾಯಮೂರ್ತಿ ನಾಗರತ್ನ ಅವರು 2012ರ ಆದೇಶದಲ್ಲಿ ಉಲ್ಲೇಖಿಸಿದ್ದರು. ಬ್ರೇಕಿಂಗ್‌ ನ್ಯೂಸ್‌, ಫ್ಲ್ಯಾಷ್‌ ನ್ಯೂಸ್‌ ಅಥವಾ ಇನ್ನಾವುದೇ ರೀತಿಯಲ್ಲಿ ಸುದ್ದಿಯನ್ನು ಪ್ರಚೋದಕಾರಿ ಮಾಡುವುದನ್ನು ತಡೆಯಬೇಕು ಎಂದು ಆದೇಶದಲ್ಲಿ ಬರೆದಿದ್ದರು. ಹಾಗೇ ಪ್ರಸಾರ ಮಾಧ್ಯಮಗಳ ನಿಯಂತ್ರಣವು ಸರ್ಕಾರ ಅಥವಾ ಅದರ ಅಧಿಕಾರಗಳಿಂದ ನಿಯಂತ್ರಿಸುವುದು ಆಗಿರಬಾರದು ಎಂದು ಸ್ಪಷ್ಟಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.