ಭರವಸೆ ಈಡೇರಿಸಲು ಬದ್ಧ ಎಂದ ಸಿಎಂ, ಝೆಲೆನ್‌ಸ್ಕಿ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ, ಸೋಮವಾರದಿಂದ ಮೂರು ದಿನ ವಿಧಾನಸಭೆ ಅಧಿವೇಶನ, ಭಯೋತ್ಪಾದನೆಗೆ ಹಣ ಪೂರೈಕೆ, ಹಿರೋಷಿಮಾದಲ್ಲಿ ಗಾಂಧೀಜಿ ಪುತ್ಥಳಿ ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, ಸೇರಿದಂತೆ ಈ ದಿನದ 10 ಪ್ರಮುಖ ಸುದ್ದಿಗಳು ಇಲ್ಲಿವೆ
ರಾಜ್ಯದ ಜನರಿಗೆ ನೀಡಿರುವ 5 ಗ್ಯಾರಂಟಿಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗದಂತೆ ಭರವಸೆಗಳನ್ನು ಜಾರಿ ಮಾಡುತ್ತೇವೆ ಎಂದರು.
ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಉಕ್ರೇನ್ ಅಧ್ಯಕ್ಷ ವೊಲೊಡಿಯರ್ ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಜಪಾನ್‌ನ ಹಿರೋಶಿಮಾದಲ್ಲಿ ನಡೆಯುತ್ತಿರುವ ಜಿ7 ಶೃಂಗ ಸಭೆಯ ವೇಳೆ ಉಭಯ ನಾಯಕರ ನಡುವೆ ಭೇಟಿ ನಡೆದಿದೆ.
ನೂತನ ಶಾಸಕರ ಪ್ರಮಾಣವಚನ ಸ್ವೀಕಾರಕ್ಕಾಗಿ ಸೋಮವಾರದಿಂದ ಮೂರು ದಿನಗಳ ಕಾಲ ವಿಧಾನಸಭೆಯ ಅಧಿವೇಶನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅತ್ಯಂತ ಹಿರಿಯ ಶಾಸಕರಾಗಿರುವ ಆರ್.ವಿ. ದೇಶಪಾಂಡೆ ಅವರನ್ನು ವಿಧಾನಸಭೆಯ ಹಂಗಾಮಿ ಅಧ್ಯಕ್ಷರಾಗಿ ನೂತನ ಶಾಸಕರಿಗೆ ಪ್ರಮಾಣವಚನ ಬೋಧಿಸುವಂತೆ ಮನವಿ ಮಾಡಲಾಗುವುದು.
ಭಯೋತ್ಪಾದನೆಗೆ ಹಣ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ- ಎನ್‌ಐಎ ಜಮ್ಮು ಮತ್ತು ಕಾಶ್ಮೀರದ 15 ಸ್ಥಳಗಳಲ್ಲಿ ಇಂದು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಜಪಾನ್‌ನ ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿಯವರ ಪುತ್ಥಳಿಯನ್ನು ಅನಾವರಣಗೊಳಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ಮೋದಿ, ‘ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿಯವರ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು. ಹಿರೋಷಿಮಾದಲ್ಲಿನ ಈ ಪುತ್ಥಳಿ ಜಗತ್ತಿಗೆ ಬಹಳ ಮುಖ್ಯವಾದ ಸಂದೇಶವನ್ನು ನೀಡುತ್ತದೆ. ಗಾಂಧಿಯವರ ಶಾಂತಿ ಮತ್ತು ಸೌಹಾರ್ದತೆಯ ಆದರ್ಶಗಳು ಜಾಗತಿಕವಾಗಿ ಪ್ರತಿಧ್ವನಿಸುತ್ತವೆ. ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತವೆ’ ಎಂದು ಹೇಳಿದ್ದಾರೆ.
ರಾಜ್ಯದ ನೂತನ ಸಚಿವರಾಗಿ ಜಮೀರ್ ಅಹ್ಮದ್ ಇಂಗ್ಲಿಷ್‌ನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿರುವುದು ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಜಮೀರ್ ನಡೆ ಖಂಡಿಸಿ ಟ್ವೀಟ್ ಮಾಡಿರುವ ಕನ್ನಡ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ, ‘ಕರ್ನಾಟಕ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಜಮೀರ್ ಅಹ್ಮದ್ ಖಾನ್ ಅವರು ಇನ್ನೂ ಕನ್ನಡ ಕಲಿಯದಿರುವುದು ನಾಚಿಕೆಗೇಡು.ಎಲ್ಲ ಸಚಿವರೂ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಜಮೀರ್ ಅಹಮದ್ ಅವರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ ಜಪಾನ್‌ಗೆ ಹೋದಾಗೆಲ್ಲಾ ಭಾರತದಲ್ಲಿ ನೋಟು ಬ್ಯಾನ್ ಹೇರುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹಾಗೂ ಮಂತ್ರಿಗಳಾಗಿ 8 ಶಾಸಕರು ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಐಪಿಎಲ್ ಲೀಗ್ ಹಂತದ ಕೊನೆ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಟಾಸ್ ಗೆದ್ದ ಚೆನ್ನೈ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 223 ರನ್‌ಗಳ ಬೃಹತ್ ಮೊತ್ತ ಗಳಿಸಿತು.
ನಗರದಲ್ಲಿ ಶನಿವಾರ ಸಂಜೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮಳೆ ಗಾಳಿಗೆ ನಗರದ ಅಲ್ಲಲ್ಲಿ ಮರದ ರೊಂಬೆಗಳು ಉರುಳಿವೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಕೊಂಬೆಗಳು ಉರುಳಿದ್ದು ಕಾರಿನಲ್ಲಿದ್ದವರು ಪಾರಾಗಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲೂ ಮರದ ರೊಂಬೆ ಕಾರೊಂದರ ಮೇಲೆ ಬಿದ್ದು ಜಖಂಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.