ADVERTISEMENT

ಬಿಜೆಪಿಯಲ್ಲಿನ ಕುಟುಂಬ ರಾಜಕಾರಣ ಬಗ್ಗೆ ಮೋದಿ ಮೌನ ಮುರಿಯುತ್ತಾರಾ? –ಜೈರಾಂ ರಮೇಶ್‌

ಕರ್ನಾಟಕದಲ್ಲಿ ನೀರಿನ ಕೊರತೆ: ಕೇಂದ್ರದಿಂದ ನೆರವಿಗೆ ನಿರಾಕರಣೆ–ಕಾಂಗ್ರೆಸ್ ವಾಗ್ದಾಳಿ

ಪಿಟಿಐ
Published 18 ಮಾರ್ಚ್ 2024, 16:55 IST
Last Updated 18 ಮಾರ್ಚ್ 2024, 16:55 IST
ಜೈರಾಂ ರಮೇಶ್
ಜೈರಾಂ ರಮೇಶ್   

ನವದೆಹಲಿ: ‘ಬಿಜೆಪಿಯಲ್ಲಿರುವ ಕುಟುಂಬ ರಾಜಕಾರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೌನ ಮುರಿಯುತ್ತಾರಾ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಂ ರಮೇಶ್‌ ಪ್ರಶ್ನಿಸಿದ್ದಾರೆ.

‘ಶಿವಮೊಗ್ಗದಲ್ಲಿ ಸೋಮವಾರ ಮೋದಿ ಅವರು ಸಭೆ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಇಲ್ಲಿನ ಸಂಸದ. ಮತ್ತೊಬ್ಬ ಮಗ ಬಿ.ವೈ. ವಿಜಯೇಂದ್ರ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ. ಈ ಕುಟುಂಬ ರಾಜಕಾರಣದ ಬಗ್ಗೆ ಮೋದಿ ತಮ್ಮ ಮೌನ ಮುರಿದು, ಬಿಜೆಪಿಯ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸುತ್ತಾರಾ?’ ಎಂದಿದ್ದಾರೆ.

‘ತೀವ್ರ ಬರದಿಂದಾಗಿ ಕರ್ನಾಟಕದ ಬಹುತೇಕ ಭಾಗವು ಕುಡಿಯುವ ನೀರಿನ ಬಿಕ್ಕಟ್ಟು ಎದುರಿಸುತ್ತಿದೆ. ಆದರೆ ರಾಜ್ಯದ ಜನರಿಗೆ ನೆರವು ನೀಡುವುದನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಿರಾಕರಿಸಿದೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳು ಬರಕ್ಕೆ ತುತ್ತಾಗಿವೆ. ಬಹುತೇಕ ಭಾಗದಲ್ಲಿ ಕುಡಿಯುವ ನೀರಿಗೂ ತತ್ವಾರವಿದೆ. ₹ 18,172 ಕೋಟಿ ಮೊತ್ತವನ್ನು ಬರ ಪರಿಹಾರವಾಗಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ. ಆದರೆ ಮೋದಿ ಸರ್ಕಾರ, ಸಂಕಷ್ಟದಲ್ಲಿರುವ ಕರ್ನಾಟಕದ ಜನರಿಗೆ ನೆರವು ನೀಡುವುದನ್ನು ತಿರಸ್ಕರಿಸಿರುವುದೇಕೆ?’ ಎಂದು ಜೈರಾಂ ರಮೇಶ್‌ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಗ್ರಾಮೀಣ ಆರ್ಥಿಕತೆಯ ಮೇಲಿನ ಬರ ಸಂಬಂಧಿತ ಒತ್ತಡ ನಿವಾರಣೆಗಾಗಿ ರಾಜ್ಯ ಸರ್ಕಾರವು ಎಂನರೇಗಾ ಯೋಜನೆಯಡಿ ಕೆಲಸದ ದಿನಗಳನ್ನು 100ರಿಂದ 150ಕ್ಕೆ ಹೆಚ್ಚಿಸಲು ಯತ್ನಿಸಿದೆ. ಆದರೆ ಮೋದಿ ಸರ್ಕಾರ ಈ ವಿಸ್ತರಣೆಗೆ ಅನುಮತಿ ನೀಡದಾಗಿದೆ. ಜೊತೆಗೆ ಕಾರ್ಮಿಕರಿಗೆ ವೇತನ ಪಾವತಿಗಾಗಿ ₹ 1,600 ಕೋಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಕರ್ನಾಟಕದ ಎಂನರೇಗಾ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಯಾವಾಗ ವೇತನ ನೀಡಲಿದೆ’ ಎಂದೂ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.