ADVERTISEMENT

ದೆಹಲಿ ಕರ್ನಾಟಕ ಸಂಘ ಅಮೃತ ಮಹೋತ್ಸವಕ್ಕೆ ಮಾಜಿ ಅಧ್ಯಕ್ಷರ ಬಹಿಷ್ಕಾರ

ಮೂಲ ಉದ್ದೇಶದಿಂದ ದೂರ ಸರಿದ ಸಂಘ: ಆರೋಪ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 16:34 IST
Last Updated 21 ಫೆಬ್ರುವರಿ 2023, 16:34 IST
   

ನವದೆಹಲಿ: ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಆಚರಣೆಯು‌ ಸಂಘದ ಮೂಲ ಉದ್ದೇಶದಿಂದ ಬಹಳ ದೂರ ಸರಿದಿದ್ದು, ಹೀಗಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸಂಘದ ಮಾಜಿ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ, ಡಾ. ವೆಂಕಟಾಚಲ ಹೆಗಡೆ ಹಾಗೂ ವಸಂತ ಶೆಟ್ಟಿ ಬೆಳ್ಳಾರೆ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕನ್ನಡ ಭಾಷೆ , ಸಾಹಿತ್ಯ ಮತ್ತು ಸಂಸ್ಕೃತಿಯ ಸಮಾವೇಶವಾಗಬೇಕಾಗಿದ್ದ ಸುವರ್ಣ‌ ಸಂಭ್ರಮವು ದೆಹಲಿ ಕನ್ನಡಿಗರನ್ನು ಕೇಂದ್ರದಲ್ಲಿರಿಸಿಕೊಂಡು ನಡೆಯುತ್ತಿಲ್ಲ. ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಲೇಖಕರು, ಕಲಾವಿದರು ದೊಡ್ಡ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಕಾಣುತ್ತಿಲ್ಲ. ಕಾರ್ಯಕ್ರಮದ ಒಟ್ಟು ಆಯೋಜನೆಯಲ್ಲಿ ಸಂಘದ ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾರ್ಯಕಾರೀ ಸಮಿತಿಯ ಕೆಲವು ಸದಸ್ಯರಿಗೂ ವಿಷಯದ ಸ್ಪಷ್ಟತೆಯಿಲ್ಲ.‌ ಹಣಕಾಸಿನ ವಿಷಯದಲ್ಲಿ‌ ಪಾರದರ್ಶಕತೆ ಕಾಪಾಡಿಕೊಂಡಿಲ್ಲ’ ಎಂದು ದೂರಿದ್ದಾರೆ.

‘ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ ನಾಯಕರಿಗೆ ಆದ್ಯತೆ ನೀಡಲಾಗಿದೆ. ಇದು ದೆಹಲಿ ಕರ್ನಾಟಕ ಸಂಘವನ್ನು ವಶಪಡಿಸಿಕೊಳ್ಳಲು ಬಿಜೆಪಿ ಮಾಡುತ್ತಿರುವ ಮತ್ತೊಂದು ಪ್ರಯತ್ನ’ ಎಂದು ಪುರುಷೋತ್ತಮ ಬಿಳಿಮಲೆ ದೂರಿದ್ದಾರೆ.

ADVERTISEMENT

‘ಸಂಘವು ಒಂದು ಸಾಂಸ್ಕೃತಿಕ ಸಂಘಟನೆ. ಬಿಜೆಪಿ ಮುಖಂಡ ಸಿ.ಟಿ.ರವಿ ಅವರನ್ನು ಕಾರ್ಯಕ್ರಮದ ಗೌರವಾಧ್ಯಕ್ಷರನ್ನಾಗಿ ನೇಮಿಸಿರುವುದು ಆಶ್ಚರ್ಯ ತಂದಿದೆ’ ಎಂದು ಅವರು ತಿಳಿಸಿದ್ದಾರೆ.

ತಡಬಡಾಯಿಸಿದ ಅಧ್ಯಕ್ಷ: ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಂಘದ ಅಧ್ಯಕ್ಷ ಸಿ.ಎಂ.ನಾಗರಾಜ, ‘ಎಲ್ಲ ಪಕ್ಷಗಳ ನಾಯಕರಿಗೆ ಆಹ್ವಾನ ನೀಡಿದ್ದೇವೆ’ ಎಂದರು. ಈ ಬಗ್ಗೆ ಪತ್ರಕರ್ತರು ಸ್ಪಷ್ಟನೆ ಕೋರಿದಾಗ, ‘ಅವರನ್ನು ಕರೆದಿದ್ದೇವೆ, ಇವರನ್ನು ಕರೆದಿದ್ದೇವೆ’ ಎಂದು ತಡಬಡಾಯಿಸಿದರು. ಸಿ.ಟಿ.ರವಿ ಅವರನ್ನು ಯಾವ ಮಾನದಂಡದ ಮೇಲೆ ಗೌರವಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗಲೂ ಸ್ಪಷ್ಟ ಉತ್ತರ ನೀಡಲಿಲ್ಲ. ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಅಲ್ಪಸಂಖ್ಯಾತ ನಾಯಕರ ಹಾಗೂ ಸಾಹಿತಿಗಳ ಹೆಸರು ಇಲ್ಲವಲ್ಲ ಎಂದು ಪ್ರಶ್ನಿಸಿದಾಗ, ‘ನಾನು 30 ವರ್ಷಗಳಿಂದ ದೆಹಲಿಯಲ್ಲಿದ್ದೇನೆ. ನೀವು ಬಂದು ಎಷ್ಟು ದಿನವಾಯಿತು’ ಎಂದು ‍ಪತ್ರಕರ್ತರ ಮೇಲೆ ರೇಗಾಡಿದರು. ಈ ಮಾತಿಗೆ ಪತ್ರಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ನಾಗರಾಜ ಕ್ಷಮೆಯಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.