ADVERTISEMENT

ವೈದ್ಯಕೀಯ ಸೀಟು ಕೊಡಿಸುವುದಾಗಿ ವಂಚನೆ ಪ್ರಕರಣ: ಕೇರಳದಲ್ಲಿ ಆರೋಪಿಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 15:22 IST
Last Updated 25 ನವೆಂಬರ್ 2024, 15:22 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ತಿರುವನಂತಪುರ: ಕರ್ನಾಟಕದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರ ಹೊರವಲಯದಲ್ಲಿರುವ ಕಾರಕೋನಂನ ಡಾ. ಸೊಮರ್‌ವೆಲ್‌ ಮೆಮೊರಿಯಲ್‌ ಸಿಎಸ್‌ಐ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ಬೆನೆಟ್‌ ಅಬ್ರಹಾಂಗಾಗಿ ಕರ್ನಾಟಕ ಪೊಲೀಸರು ಸೋಮವಾರ ಶೋಧ ನಡೆಸಿದರು.

ರಾಜ್ಯದ ವಿದ್ಯಾರ್ಥಿಗಳಿಗೆ ಅಬ್ರಹಾಂ ₹ 7.25 ಕೋಟಿ ವಂಚಿಸಿದ್ದು, ಬೆಂಗಳೂರಿನ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಅಬ್ರಹಾಂ ಕೂಡ ಆರೋಪಿಯಾಗಿದ್ದು, ಎರಡನೇ ಬಾರಿ ಕೇರಳದಲ್ಲಿ ಕರ್ನಾಟಕ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಂಧನದ ಭೀತಿಯಿಂದ ಅಬ್ರಹಾಂ ತಲೆಮರೆಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.  

ADVERTISEMENT

ಕರ್ನಾಟಕದ ಪೊಲೀಸರಿಗೆ ಕೇರಳದ ಪೊಲೀಸರು ನೆರವು ನೀಡಿದರು ಎಂದು ವೆಳ್ಳರಡ ಪೊಲೀಸ್‌ ಠಾಣೆಯ ಮೂಲಗಳು ತಿಳಿಸಿವೆ.

ಡಾ. ಅಬ್ರಹಾಂ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿರುವುದು ಆಡಳಿತಾರೂಢ ಸಿಪಿಐ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಶಶಿ ತರೂರ್‌ ವಿರುದ್ಧ ಸಿಪಿಐ ಅಭ್ಯರ್ಥಿಯಾಗಿ ಡಾ. ಅಬ್ರಹಾಂ ಕಣಕ್ಕಿಳಿದಿದ್ದರು. ತರೂರ್‌ ವಿರುದ್ಧ ಸೋಲು ಅನುಭವಿಸಿ, ಮೂರನೇ ಸ್ಥಾನ ಪಡೆದಿದ್ದರು.

ಹಣಕಾಸು ಅಕ್ರಮ ವ್ಯವಹಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ತನಿಖೆ ಕೈಗೊಂಡಿದೆ. ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕ ಡಾ. ಅಬ್ರಹಾಂ ಹಾಗೂ ಕೇರಳ ಸಿಎಸ್‌ಐನ ದಕ್ಷಿಣ ಧರ್ಮಪ್ರಾಂತದ ಬಿಷಪ್‌ ಧರ್ಮರಾಜ್‌ ಸೇರಿದಂತೆ, ಕಾಲೇಜಿನ ಆಡಳಿತ ಮಂಡಳಿಯ ಹಲವು ಮಂದಿ ತನಿಖೆ ಎದುರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.