ನವದೆಹಲಿ: ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ರೋಹಿಂಗ್ಯಾಗಳ ಕುರಿತು ಸುಪ್ರೀಂ ಕೋರ್ಟ್‌ಗೆ ಪರಿಷ್ಕೃತ ಹೇಳಿಕೆ ಸಲ್ಲಿಸಿರುವ ರಾಜ್ಯ ಸರ್ಕಾರ, ಅವರನ್ನು ಗಡಿಪಾರು ಮಾಡುವ ಯೋಚನೆ ಇಲ್ಲ ಎಂಬ ಇತ್ತೀಚಿನ ಹೇಳಿಕೆಯಿಂದ ಹಿಂದೆ ಸರಿದಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆ ಗುರುತಿಸಲಾಗಿರುವ 126 ಜನ ರೋಹಿಂಗ್ಯಾಗಳನ್ನು ಪೊಲೀಸರು ಯಾವುದೇ ನಿರಾಶ್ರಿತರ ಶಿಬಿರದಲ್ಲಿ ಅಥವಾ ಬಂಧನ ಕೇಂದ್ರದಲ್ಲಿ ಇರಿಸಿಲ್ಲ ಎಂದು ಕರ್ನಾಟಕ ಗೃಹ ಇಲಾಖೆಯು ಅಕ್ಟೋಬರ್ 26ರಂದು ಸಲ್ಲಿಸಿರುವ ಪರಿಷ್ಕೃತ ಹೇಳಿಕೆಯಲ್ಲಿ ಹೇಳಿದೆ.
ರಾಜ್ಯದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ರೋಹಿಂಗ್ಯಾಗಳನ್ನು ಗಡಿಪಾರು ಮಾಡಲು ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ಮುಖಂಡ, ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು 2017ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗೆ ಸಂಬಂಧಿಸಿದಂತೆ ಅಕ್ಟೋಬರ್ ಮೊದಲ ವಾರ ನ್ಯಾಯಪೀಠಕ್ಕೆ ಲಿಖಿತ ಹೇಳಿಕೆ ಸಲ್ಲಿಸಿದ್ದ ರಾಜ್ಯ ಸರ್ಕಾರ, ವಿಚಾರಣೆಗೆ ಅರ್ಹವಲ್ಲದ ಹಾಗೂ ಸಮರ್ಥನೀಯವಲ್ಲದ ಈ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿತ್ತು.
ಅರ್ಜಿದಾರರು ರಾಜ್ಯ ಸರ್ಕಾರದ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪಮಾಡಿಲ್ಲ. ಅಲ್ಲದೆ, ಈ ಕುರಿತು ನ್ಯಾಯಪೀಠ ಹೊರಡಿಸುವ ಯಾವುದೇಆದೇಶವನ್ನು ಅಕ್ಷರಶಃ ಪಾಲಿಸಲಾಗುವುದು ಎಂದು ಇದೀಗ ಸಲ್ಲಿಸಿರುವ ಹೇಳಿಕೆಯಲ್ಲಿ ಸರ್ಕಾರ ತಿಳಿಸಿದೆ.
72 ಜನ ರೋಹಿಂಗ್ಯಾಗಳು ಬೆಂಗಳೂರಿನ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿದ್ದು, ಪೊಲೀಸರು ಅವರನ್ನು ಗಡಿಪಾರು ಮಾಡಲು ಬಲವಂತದ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರ ಈ ಮೊದಲು ಲಿಖಿತ ಹೇಳಿಕೆಯಲ್ಲಿ ನ್ಯಾಯಪೀಠಕ್ಕೆ ವಿವರಿಸಿತ್ತು.
ಬಾಂಗ್ಲಾದೇಶಿಯರು ಹಾಗೂ ರೊಹಿಂಗ್ಯಾಗಳು ಸೇರಿದಂತೆ ಎಲ್ಲ ಅಕ್ರಮ ವಲಸಿಗರು ಮತ್ತು ನುಸುಳುಕೋರರನ್ನು ಒಂದು ವರ್ಷದೊಳಗೆ ಪತ್ತೆ ಮಾಡಿ, ಬಂಧಿಸುವ ಮೂಲಕ ಗಡಿಪಾರು ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿ ಮೂಲಕ ಕೋರಿದ್ದ ಉಪಾಧ್ಯಾಯ, ಅಕ್ರಮ ವಲಸೆ ಮತ್ತು ಒಳನುಸುಳುವಿಕೆ ತಡೆಯಲು ಕಾನೂನುಗಳಿಗೆ ಅಗತ್ಯ ತಿದ್ದುಪಡಿ ತರುವಂತೆಯೂ ಸೂಚಿಸಬೇಕು ಎಂದು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.