ನವದೆಹಲಿ: ಸಿಖ್ ಧರ್ಮಗುರು ಗುರುನಾನಕ್ ದೇವ್ ಅವರ ಜನ್ಮ ದಿನಾಚರಣೆ ಅಂಗವಾಗಿ ಮುಂಬರುವ ಗುರು ಪೂರ್ಣಿಮೆಗೂ ಮೊದಲು ಪಾಕಿಸ್ತಾನದೊಂದಿಗೆ ಚರ್ಚಿಸಿ ಕರ್ತಾರ್‌ಪುರ ಕಾರಿಡಾರ್ ಅನ್ನು ಸಾರ್ವಜನಿಕರಿಗೆ ಮತ್ತೆ ಮುಕ್ತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
11 ನಾಯಕರನ್ನು ಒಳಗೊಂಡ ಪಂಜಾಬ್‌ನ ಬಿಜೆಪಿ ನಾಯಕರ ನಿಯೋಗವು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಗುರುಪೂರ್ಣಿಮೆಗೆ ಮೊದಲು ಕರ್ತಾರ್‌ಪುರ ಕಾರಿಡಾರ್ ಅನ್ನು ತೆರೆಯುವ ಕುರಿತು ಮನವಿ ಮಾಡಿದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.
ಅಟ್ಟಾರಿ-ವಾಘಾ ಗಡಿಯ ಮೂಲಕ ಕರ್ತಾರ್‌ಪುರ ಗುರುದ್ವಾರಕ್ಕೆ ತೆರಳಲು ಸಿಖ್ ಯಾತ್ರಿಗಳಿಗೆ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ.
ಈ ವರ್ಷ ಎರಡು ಬಾರಿ ಸಿಖ್ ಯಾತ್ರಿಕರ ಭೇಟಿಗೆ ಅನುಮತಿ ನಿರಾಕರಿಸಿದ್ದ ಪಾಕಿಸ್ತಾನ, ಕರ್ತಾರ್‌ಪುರ ಕಾರಿಡಾರ್ ಅನ್ನು ಮತ್ತೆ ತೆರೆಯುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿತ್ತು.
ಕೋವಿಡ್–19ನಿಂದಾಗಿ ಪಾಕಿಸ್ತಾನದ ಕರ್ತಾರ್‌ಪುರದ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಮಾರ್ಚ್, 2020ರಂದು ತೀರ್ಥಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.
ಈ ವರ್ಷ ನವೆಂಬರ್ 19ರಂದು ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. 4.7 ಕಿ.ಮೀ ಉದ್ದದ ಕರ್ತಾರ್‌ಪುರ ಕಾರಿಡಾರ್, ಭಾರತದ ಗುರುದಾಸ್‌ಪುರದ ಡೇರಾ ಬಾಬಾ ನಾನಕ್ ಸಾಹಿಬ್ ಮತ್ತು ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ಗುರುದ್ವಾರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದನ್ನು 2019ರ ನವೆಂಬರ್‌ನಲ್ಲಿ ಉದ್ಘಾಟಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.