ADVERTISEMENT

96ನೇ ವಯಸ್ಸಿನಲ್ಲಿ ಸಾಕ್ಷರತಾ ‍ಪರೀಕ್ಷೆ ಪಾಸು ಮಾಡಿದ್ದ ಕಾರ್ತ್ಯಾಯಿನಿ ಅಮ್ಮ ನಿಧನ

ಪಿಟಿಐ
Published 11 ಅಕ್ಟೋಬರ್ 2023, 7:32 IST
Last Updated 11 ಅಕ್ಟೋಬರ್ 2023, 7:32 IST
   

ತಿರುವನಂತಪುರ: ಕೇರಳ ರಾಜ್ಯದ ಸಾಕ್ಷರತಾ ಮಿಷನ್‌ ಯೋಜನೆಯಡಿ ನಡೆದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಅತಿ ಹಿರಿಯ ಮಹಿಳೆ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಕಾರ್ತ್ಯಾಯಿನಿ ಅಮ್ಮ ಅವರು ಅಕ್ಟೋಬರ್‌ 10 ರಂದು ನಿಧನರಾ‌ಗಿದ್ದಾರೆ.

ಆಳಪ್ಪುಳ ಜಿಲ್ಲೆಯ ಚೆಪ್ಪಾಡ್‌ ಗ್ರಾಮದ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 101 ವಯಸ್ಸಾಗಿತ್ತು.

ಪಾರ್ಶ್ವವಾಯು ತುತ್ತಾಗಿದ್ದ ಅವರು ಕೆಲ ದಿನಗಳಿಂದ ಹಾಸಿಗೆ ಹಿಡಿದಿದ್ದರು. 96ನೇ ವಯಸ್ಸಿನಲ್ಲಿ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ‘ಅತಿ ಹಿರಿಯ ವಿದ್ಯಾರ್ಥಿ’ ಎನಿಸಿಕೊಂಡಿದ್ದರು. ಅಲ್ಲದೆ ನಾಲ್ಕನೇ ತರಗತಿಗೆ ಸಮಾನವಾದ ‘ಅಕ್ಷರಲಕ್ಷಂ’ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದರು.

ADVERTISEMENT

ಈ ಪರೀಕ್ಷೆಗೆ ಹಾಜರಾದ 43,330 ಅಭ್ಯರ್ಥಿಗಳ ಪೈಕಿ ಕಾರ್ತ್ಯಾಯಿನಿ ಅಮ್ಮ ಅತಿ ಹಿರಿಯರೆನಿಸಿಕೊಂಡಿದ್ದರು. 2020ರ ಮಾರ್ಚ್‌ನಲ್ಲಿ ಮಹಿಳಾ ದಿನದಂದು ಆಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಂದ ನಾರಿಶಕ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಕಾರ್ತಾಯಿನಿ ಅಮ್ಮ ಅವರ ಸಾವಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸಂತಾಪ ವ್ಯಕ್ತಪಡಿಸಿದ್ದಾರೆ. ಹತ್ತನೇ ತರಗತಿ ತೇರ್ಗಡೆಗೊಂಡು ಕೆಲಸ ಪಡೆಯಬೇಕು ಎಂದು ತಮ್ಮನ್ನು ಭೇಟಿ ಮಾಡಿದ ವೇಳೆ ಕಾರ್ತಾಯಿನಿ ಅಮ್ಮ ಆಸೆ ವ್ಯಕ್ತಪಡಿಸಿದ್ದನ್ನು ಪಿಣರಾಯಿ ನೆನಪಿಸಿಕೊಂಡಿದ್ದಾರೆ.

ಅವರ ಮಾತಿನಲ್ಲಿ ಆತ್ಮವಿಶ್ವಾಸ ಹಾಗೂ ದೃಢ ನಿಶ್ಚಯ ಇತ್ತು ಎಂದು ಪಿಣರಾಯಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.