ADVERTISEMENT

ಚೀನಾ ವ್ಯಕ್ತಿಯ ವೀಸಾ ಪ್ರಕರಣದಲ್ಲಿ ಕಾರ್ತಿ ಚಿದಂಬರಂಗೆ ₹50 ಲಕ್ಷ ಲಂಚ: ಇ.ಡಿ

ಪಿಟಿಐ
Published 21 ಮಾರ್ಚ್ 2024, 11:56 IST
Last Updated 21 ಮಾರ್ಚ್ 2024, 11:56 IST
 ಕಾರ್ತಿ ಚಿದಂಬರಂ
 ಕಾರ್ತಿ ಚಿದಂಬರಂ   

ನವದೆಹಲಿ: ಪಂಜಾಬ್‌ನಲ್ಲಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಿದ್ದ ಸಂಸ್ಥೆಯ ಚೀನಾ ಅಧಿಕಾರಿಯೊಬ್ಬರ ವೀಸಾ ಮರುಬಳಕೆಗೆ ಕೇಂದ್ರ ಗೃಹ ಸಚಿವಾಲಯದಿಂದ ಅನುಮತಿ ಕೊಡಿಸಲು ಸಂಸದ ಕಾರ್ತಿ ಚಿದಂಬರಂ ತಮ್ಮ ಆಪ್ತರ ಮೂಲಕ ₹50 ಲಕ್ಷ ಲಂಚ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ) ಆರೋಪಿಸಿದೆ.

ಆ ಲಂಚದ ಹಣವನ್ನು ಅಕ್ರಮ ನಗದು ವಹಿವಾಟು ಮೂಲಕ ಕಾರ್ತಿ ಅವರ ಕಂಪನಿಗೆ ಸೇರಿಸಲಾಗಿದೆ ಎಂದೂ ಅದು ದೂರಿದೆ.

ತಮಿಳುನಾಡಿನ ಶಿವಗಂಗಾ ಕ್ಷೇತ್ರದ ಸಂಸದರಾಗಿರುವ ಕಾರ್ತಿ ಚಿದಂಬರಂ ಅವರನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಹಲವು ಬಾರಿ ವಿಚಾರಣೆಗೆ ಒಳಪಡಿಸಿದೆ.

ADVERTISEMENT

ಇ.ಡಿ ಆರೋಪಗಳಿಗೆ ವಕೀಲರ ಮೂಲಕ ನ್ಯಾಯಾಲಯದಲ್ಲಿ ಉತ್ತರಿಸುವುದಾಗಿ ಕಾರ್ತಿ ಹೇಳಿದ್ಧಾರೆ.

ಕಾರ್ತಿ ಚಿದಂಬರಂ, ಅವರ ಕಂಪನಿ ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೇಡ್, ಕಾರ್ತಿ ಅವರ ಆಪ್ತ, ಅಕೌಂಟೆಂಟ್ ಎಸ್ ಭಾಸ್ಕರ ರಾಮನ್, ಚೀನಾದ ನೌಕರರು ಕೆಲಸ ಮಾಡುತ್ತಿದ್ದ ತಲ್ವಾಂಡಿ ಸಬೊ ಪವರ್ ಲಿಮಿಟೇಡ್ ಸಂಸ್ಥೆ ವಿರುದ್ಧ ಇ.ಡಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಆ ಆರೋಪ ಮಾಡಲಾಗಿದೆ.

ಈ ಸಂಬಂಧ ಹಣ ಅಕ್ರಮ ವರ್ಗಾವಣೆ ತಡೆ(ಪಿಎಂಎಲ್‌ಎ) ಅಡಿ ರಚನೆಯಾಗಿರುವ ದೆಹಲಿಯ ನ್ಯಾಯಾಲಯವು ಕಾರ್ತಿ ಚಿದಂಬರಂ ಸೇರಿ ದೋಷಾರೋಪ ಪಟ್ಟಿಯಲ್ಲಿ ಹೆಸರಿರುವ ಎಲ್ಲರೂ ಏಪ್ರಿಲ್ 15ಕ್ಕೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.