ಚೆನ್ನೈ: ದ್ರಾವಿಡ ರಾಜಕಾರಣದ ಭೀಷ್ಮ, ಡಿಎಂಕೆ ಅಧ್ಯಕ್ಷ ಮುತ್ತುವೇಲ್ ಕರುಣಾನಿಧಿ ಅವರ ಅಂತ್ಯ ಸಂಸ್ಕಾರಕ್ಕೆ ಜನಸಾಗರದ ಕಣ್ಣೀರು ಸಾಕ್ಷಿಯಾಯಿತು. ತಮಿಳುನಾಡು ಸರ್ಕಾರದ ನಿರಾಕರಣೆಯ ನಡುವೆ ಕೋರ್ಟ್ ಹೋರಾಟದ ಮೂಲಕ ಪಡೆದ ಮರೀನಾ ಕಡಲ ಕಿನಾರೆಯಲ್ಲಿಯೇ ಡಿಎಂಕೆ ತಲೈವರ್ (ನಾಯಕ) ಚಿರವಿಶ್ರಾಂತಿಗೆ ಜಾರಿದರು.
ಸಾಹಿತ್ಯ, ಸಿನಿಮಾ ಮತ್ತು ರಾಜಕೀಯ ಸಾಧನೆಗಳ ಮೂಲಕ ತಮಿಳುನಾಡಿನ ರಾಜಕಾರಣದಲ್ಲಿ ಸುದೀರ್ಘ ಕಾಲ ಅಸಾಧಾರಣ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಕರುಣಾನಿಧಿ ಅವರನ್ನು ಗುರು ಸಿ.ಎನ್. ಅಣ್ಣಾದೊರೈ ಸಮಾಧಿಯ ಸನಿಹದಲ್ಲಿಯೇ ಮಣ್ಣು ಮಾಡಲಾಯಿತು. ಇದು ಕರುಣಾನಿಧಿ ಮಗ ಎಂ.ಕೆ. ಸ್ಟಾಲಿನ್ ಮತ್ತು ಪಕ್ಷದ ಕಾರ್ಯಕರ್ತರ ಬಯಕೆಯಾಗಿತ್ತು.
ಆದರೆ, ಮುಖ್ಯಮಂತ್ರಿಯಲ್ಲದವರಿಗೆ ಈ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮತ್ತು ಸ್ಮಾರಕ ನಿರ್ಮಾಣಕ್ಕೆ ಅವಕಾಶ ಇಲ್ಲ ಎಂದು ತಮಿಳುನಾಡು ಸರ್ಕಾರ ಅವಕಾಶ ನಿರಾಕರಿಸಿತು. ಇದನ್ನು ಪ್ರಶ್ನಿಸಿ ಮಂಗಳವಾರ ರಾತ್ರಿಯೇ ಮದ್ರಾಸ್ ಹೈಕೋರ್ಟ್‌ಗೆ ಡಿಎಂಕೆ ಕಾರ್ಯಕರ್ತರು ಅರ್ಜಿ ಸಲ್ಲಿಸಿದರು. ಮರೀನಾ ಕಿನಾರೆಯಲ್ಲಿಯೇ ‘ಗೌರವಾರ್ಹ ವಿದಾಯ’ಕ್ಕೆ ಏರ್ಪಾಡು ಮಾಡಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತು. ದಣಿವರಿಯದ ಹೋರಾಟಗಾರನ ಚಿರವಿಶ್ರಾಂತಿಯ ತಾಣವನ್ನೂ ಹೋರಾಟದ ಮೂಲಕವೇ ಪಡೆಯಬೇಕಾದ ವಿಪರ್ಯಾಸ ಸೃಷ್ಟಿಯಾಯಿತು. ಹೋರಾಟದ ಬದುಕಿನ ಕೊನೆಯೂ ಗೆಲುವಿನ ಹೋರಾಟದಲ್ಲಿ ಕೊನೆಯಾಯಿತು.
(ಸ್ಟ್ಯಾಲಿನ್ ಗೌರವ ಸಮರ್ಪಣೆ)
ರಾಜಾಜಿ ಸಭಾಂಗಣದಿಂದ ಮರೀನಾ ಕಿನಾರೆಯ ವರೆಗೂ ಡಿಎಂಕೆಯ ಕಪ್ಪು–ಕೆಂಪು ಬಣ್ಣದ ಬಾವುಟಗಳು ಪಟಪಟಿಸುತ್ತಿದ್ದವು. ಬಾವುಟದಲ್ಲಿ ಸೂರ್ಯನ ಚಿಹ್ನೆ ರಾರಾಜಿಸುತ್ತಿತ್ತು. ಬುಧವಾರ ಸಂಜೆ ಏಳು ಗಂಟೆಯ ಹೊತ್ತಿಗೆ ಕೆಂಬಣ್ಣದ ಸೂರ್ಯ ಕಡಲಿನಾಚೆ ಮುಳುಗುತ್ತಿದ್ದಂತೆಯೇ ‘ದ್ರಾವಿಡ ಸೂರ್ಯ’ ಕರುಣಾನಿಧಿ ಮಲಗಿದ್ದ ಚಂದನದ ಶವಪೆಟ್ಟಿಗೆ ಮಣ್ಣಿನಲ್ಲಿ ಮರೆಯಾಯಿತು.
ಮಗ ಮತ್ತು ಉತ್ತರಾಧಿಕಾರಿ ಎಂ.ಕೆ.ಸ್ಟಾಲಿನ್ ಮತ್ತು ಕುಟುಂಬದ ಇತರ ಸದಸ್ಯರು ನಿರಂತರವಾಗಿ ಕಣ್ಣೀರು ಹರಿಸುತ್ತಿದ್ದರು. ಅಂತ್ಯಸಂಸ್ಕಾರದ ಸ್ಥಳದಲ್ಲಿಯೂ ಮೂರು ಬಾರಿ ಮೃತದೇಹಕ್ಕೆ ಗೌರವ ಸಲ್ಲಿಸಿದರು. ಮರೀನಾ ಕಿನಾರಿಯಲ್ಲಿ ಗಾಜಿನ ಪೆಟ್ಟಿಗೆಯಿಂದ ಹೊರತೆಗೆದ ಶವವನ್ನು ಶ್ರೀಗಂಧದ ಪೆಟ್ಟಿಗೆಗೆ ಸ್ಥಳಾಂತರಿಸಲಾಯಿತು. ತಕ್ಷಣವೇ ಅಣ್ಣಾದೊರೈ ಸಮಾಧಿಯ ಪಕ್ಕ ಸಿದ್ಧಪಡಿಸಲಾಗಿದ್ದ ಸ್ಥಳದಲ್ಲಿ ಇರಿಸಲಾಯಿತು.
(ಕಣ್ಣೀರಾದ ಕರುಣಾನಿಧಿ ಕುಟುಂಬ)
ಡಿಎಂಕೆ ನಾಯಕನ ಮೃತದೇಹವನ್ನು ಬುಧವಾರ ಬೆಳಿಗ್ಗೆಯಿಂದ ಸಂಜೆಯ ವರೆಗೆ ಸಾರ್ವಜನಿಕರ ದರ್ಶನಕ್ಕಾಗಿ ಸುಮಾರು 12 ತಾಸು ರಾಜಾಜಿ ಸಭಾಂಗಣದಲ್ಲಿ ಇರಿಸಲಾಗಿತ್ತು. ತಮಿಳು ರಾಜಕೀಯದ ಪ್ರಮುಖರಾದ ಎಂ.ಜಿ. ರಾಮಚಂದ್ರನ್ ಮತ್ತು ಜೆ.ಜಯಲಲಿತಾ ಅವರ ಮೃತದೇಹಗಳನ್ನೂ ಇಲ್ಲಿಯೇ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಇವರಿಬ್ಬರ ಅಂತ್ಯಸಂಸ್ಕಾರವೂ ಮರೀನಾ ಕಿನಾರೆಯಲ್ಲಿಯೇ ನಡೆದಿದೆ. ರಾಜಕೀಯ ಗುರು ಮತ್ತು ವೈರಿಗಳ ನಡುವೆಯೇ ಕರುಣಾನಿಧಿ ಅಂತಿಮ ವಿಶ್ರಾಂತಿ ಪಡೆಯಲಿದ್ದಾರೆ.
ನಾಸ್ತಿಕ ಎಂದು ಘೋಷಿಸಿಕೊಂಡಿದ್ದ ಕರುಣಾನಿಧಿ ಅಂತ್ಯ ಸಂಸ್ಕಾರದಲ್ಲಿ ಯಾವುದೇ ಧಾರ್ಮಿಕ ವಿಧಿವಿಧಾನಗಳು ಇರಲಿಲ್ಲ.
(ಎಂ.ಕರುಣಾನಿಧಿ ಅವರ ಪುತ್ರಿಕನಿಮೊಳಿ ತನ್ನ ತಂದೆಗೆ ಅಂತಿಮ ಪುಷ್ಪ ನಮನ ಸಲ್ಲಿಸಿದ ಕ್ಷಣ)
ಗುರುವಿನ ಹೃದಯ...
ತಮ್ಮ ರಾಜಕೀಯ ಗುರು ಸಿ.ಎನ್.ಅಣ್ಣಾದೊರೈ 1969ರಲ್ಲಿ ಸತ್ತಾಗ ಕರುಣಾನಿಧಿ ಭಾವುಕ ನುಡಿನಮನ ಸಲ್ಲಿಸಿದ್ದರು. ಅವರ ಹೃದಯವನ್ನು ಪಡೆದುಕೊಳ್ಳುವುದಾಗಿಯೂ, ಈ ಜಗತ್ತಿನಿಂದ ನಿವೃತ್ತಿಯಾದ ಬಳಿಕ ಹಿಂದಿರುಗಿಸುವುದಾಗಿಯೂ ಆ ನುಡಿನಮನದಲ್ಲಿ ಹೇಳಿದ್ದರು. 49 ವರ್ಷ ಬಳಿಕ ಅಣ್ಣಾದೊರೈ ಸಮೀಪದಲ್ಲಿಯೇ ಕರುಣಾನಿಧಿ ಚಿರನಿದ್ರೆಗೆ ಜಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿ ಹತ್ತಾರು ರಾಜಕೀಯ ಮುಖಂಡರಿಂದ ಅಂತಿಮ ನಮನ
ರಾಜಾಜಿ ಸಭಾಂಗಣದಲ್ಲಿ 12 ತಾಸು ಅಂತಿಮ ದರ್ಶನ
ರಾಜಾಜಿ ಸಭಾಂಗಣದಿಂದ ಮರೀನಾ ಕಿನಾರೆವರೆಗಿನ ಮೂರು ಕಿ.ಮೀ. ಮೆರವಣಿಗೆ
2 ತಾಸು ತೆಗೆದುಕೊಂಡ ಮೆರವಣಿಗೆಯಲ್ಲಿ ಲಕ್ಷಾಂತರ ಮಂದಿ
ಜನರ ಜತೆಗೆ ಕಾಲ್ನಡಿಗೆಯಲ್ಲಿಯೇ ಸಾಗಿದ ಸ್ಟಾಲಿನ್ ಮತ್ತು ಡಿಎಂಕೆಯ ಇತರ ಮುಖಂಡರು
ಕರುಣಾನಿಧಿ ದೇಹವನ್ನು ಮಣ್ಣು ಮಾಡಿದಾಗ ಸ್ಟಾಲಿನ್ ಸಂತೈಸಲಾಗದಂತೆ ಬಿಕ್ಕಿ ಬಿಕ್ಕಿ ಅತ್ತರು. ಸಹೋದರಿ ಸೆಲ್ವಿ ಅಣ್ಣನನ್ನು ಅಪ್ಪಿಕೊಂಡರೆ, ಸೋದರ ಸಂಬಂಧಿ ಕಲಾನಿಧಿ ಮಾರನ್ ಸಂತೈಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.