ADVERTISEMENT

ಸಾಮಾಜಿಕ ಮಾಧ್ಯಮಗಳು: ಕರುಣಾನಿಧಿಗೆ ಕನ್ನಡಿಗರ ಸಂತಾಪ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2018, 18:10 IST
Last Updated 7 ಆಗಸ್ಟ್ 2018, 18:10 IST
   

ಬೆಂಗಳೂರು: ಕರುಣಾನಿಧಿ ನಿಧನದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಸಂತಾಪ ವ್ಯಕ್ತವಾಗಿದೆ. ಫೇಸ್‌ಬುಕ್ ಮತ್ತು ಟ್ವಿಟ್ಟರ್ ಮೂಲಕ ರಾಜಕಾರಣಿಗಳು, ಪತ್ರಕರ್ತರು, ಸಿನಿ ತಾರೆಯರು, ಅಭಿಮಾನಿಗಳು ಸೇರಿದಂತೆ ಶ್ರೀಸಾಮಾನ್ಯರು ಸಂತಾಪ ಸೂಚಿಸಿದ್ದಾರೆ.

ಕರುಣಾನಿಧಿ ಅವರೊಂದಿಗೆ ಒಡನಾಟ ಇಟ್ಟುಕೊಂಡವರು, ಅವರ ಬಗ್ಗೆ ಮಾಹಿತಿ ಸಂಗ್ರಹಿಸಿದವರು, ಅವರ ಬಗ್ಗೆ ಓದಿದವರು ಸಾಮಾಜಿಕ ಮಾಧ್ಯಮಗಳ ಮೂಲಕ ನೆನಪಿನ ಬುತ್ತಿಯನ್ನು ಹಂಚಿಕೊಂಡಿದ್ದಾರೆ.

ಹಿರಿಯ ಪತ್ರಕರ್ತ ಜಿ.ಎನ್ ಮೋಹನ್ ಅವರು ಬರೆದ ಕ್ಯೂಬಾ ಪ್ರವಾಸ ಕಥನ ಪುಸ್ತಕವನ್ನು ಕರುಣಾನಿಧಿ ಓದಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿಗಳು ಮೋಹನ್ ಅವರಿಗೆ ಕರೆ ಮಾಡಿದ್ದರಂತೆ. ಕರುಣಾನಿಧಿ ಅವರು ಒಂದು ಕವನವನ್ನು ಬರೆದು ಅವರಿಗೆ ಕಳುಹಿಸಿಕೊಟ್ಟಿರುವ ಬಗ್ಗೆ ಮೋಹನ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ಸೇತು ಸಮುದ್ರಂ ಕುರಿತು ಮಾತನಾಡುವಾಗ ರಾಮ ಯಾರು ? ರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದು ಎಂಬ ಹೇಳಿಕೆಗೆ ಬಾರಿ ಪ್ರತಿರೋಧ ಎದುರಾದರು ಕರುಣಾನಿಧಿ ತನ್ನ ನಿಲುವಿಂದ ಹಿಂದೆ ಸರಿಯಲಿಲ್ಲ ಎಂಬ ವಿಚಾರವನ್ನು ರಾಧಾಕೃಷ್ಣ ಎಂಬುವರು ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಚೇತನ್ ಜಿರಾಲ್ ಎಂಬುವರು ಹಿಂದಿ ವಿರೋಧಿ ಹೋರಾಟ ಮತ್ತು ಕಾವೇರಿ ನದಿ ನೀರಿನ ಸಮಸ್ಯೆ ಬಗೆಗೆ ನೆನಪು ಮಾಡಿಕೊಂಡಿದ್ದಾರೆ.

ವಿಪ್ಲವ ಜಗತ್ತು ಎಂಬ ಖಾತೆದಾರರು ಕರುಣಾನಿಧಿ ಅವರು ದುಡಿವ ವರ್ಗದ ಜನರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹಚ್ಚಿದ ಬಗ್ಗೆ ಬರೆದುಕೊಂಡಿದ್ದಾರೆ. ಆರ್ಯರ ಶೋಷಣೆ ಬಗ್ಗೆಯೂ ಅವರು ಬರೆದಿದ್ದಾರೆ.

ವ್ಯಂಗ್ಯ ಚಿತ್ರಕಾರ ಪಿ. ಮಹಮ್ಮದ್ ಅವರು ಡಾ. ರಾಜ್‌ಕುಮಾರ್ ಅವರ ಅಪಹರಣ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿಕೊಟ್ಟಿದನ್ನು ವಿವರಿಸಿದ್ದಾರೆ.

ಎಂ ಕರುಣಾನಿಧಿಯವರ ಒಂದು ನೆನಪು:ಡಾ ರಾಜ್ ಅವರನ್ನು ವೀರಪ್ಪನ್ ಅಪಹರಿಸಿಕೊಂಡು ಹೋಗಿ, ಕಾಡಿನಲ್ಲಿ ಒತ್ತೆಯಾಗಿಟ್ಟುಕೊಂಡಿದ್ದ ಸಂದರ್ಭ ಎಸ್ಸೆಮ್ ಕೃಷ್ಣ ಮತ್ತು ಕರುಣಾನಿಧಿ ಸರಕಾರಗಳಿಗೆ ಭಾರಿ ಸಂಕಷ್ಟದ ಕಾಲವಾಗಿತ್ತು. ಎರಡೂ ರಾಜ್ಯಗಳ ಸೀಯೆಮ್ಮುಗಳ ನಡುವೆ 24×7 ಹಾಟ್ ಲೈನ್ ಫೋನ್ ಸಂಭಾಷಣೆ ನಡೆಯುತ್ತಿತ್ತಂತೆ. ವದಂತಿಗಳು ಕಾಳ್ಗಿಚ್ಚಿನಂತೆ ಹರಡಿ ಎರಡೂ ರಾಜ್ಯಗಳನ್ನು ಉದ್ವಿಗ್ನತೆಯ ತುದಿಯಲ್ಲಿ ನಿಲ್ಲಿಸುತ್ತಿದ್ದವು. ಶಾಲೆ-ಕಾಲೇಜುಗಳಿಗೆ ವಾರಗಟ್ಟಳೆ ರಜೆ ಘೋಷಿಸಲಾಗಿತ್ತು. ಉಭಯ ರಾಜ್ಯಗಳ ನಡುವೆ ಬಸ್ ಸಂಚಾರ ಬಂದ್ ಆಗಿತ್ತು. ಎರಡು ಸರಕಾರಗಳಿಗೆ ಜನರ ಸಂಶಯಗಳನ್ನು ಹೋಗಲಾಡಿಸುವುದೆ ದೊಡ್ಡ ಸವಾಲಾಗಿತ್ತು. ಇಂಥ ಒಂದು ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕೃಷ್ಣ ಮತ್ತು ಕರುಣಾನಿಧಿ ಜಂಟಿ ಪತ್ರಿಕಾ ಗೋಷ್ಠಿಯೊಂದನ್ನು ನಡೆಸಿಕೊಟ್ಟಿದ್ದರು. ಕೃಷ್ಣ ಅವರ ಮಾತು ಮುಕ್ಕಾಲು ಭಾಗ ಇಂಗ್ಲಿಷಿನಲ್ಲಿತ್ತು. ಆದರೆ ಕರುಣಾನಿಧಿ ಮಾತ್ರ ಅಚ್ಚ ತಮಿಳಿನಲ್ಲಿ ತಮ್ಮ ಇಡೀ ಮಾತುಕತೆಯನ್ನು ನಡೆಸಿದ್ದರು. ಅವರ ಬಾಯಿಯಲ್ಲಿ ತಮಿಳು ಭಾಷೆ ಅದ್ಭುತವಾಗಿ ಹೊಮ್ಮಿತ್ತು. ಒಂದೇ ಒಂದು ಅನ್ಯ ಭಾಷೆ ಪದವನ್ನು ಅವರು ಬಳಸಲಿಲ್ಲ..

ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಅವರು ಕರುಣಾನಿಧಿ ಅವರ ಎಡಪಂಥೀಯ ವಿಚಾರಧಾರೆಗಳನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಡಿದ್ದಾರೆ.

ನವರಸ ನಾಯಕ ಜಗ್ಗೇಶ್ ಕರುಣಾನಿಧಿ ಅವರೊಂದಿಗಿನ ನೆನಪನ್ನು ಟ್ವೀಟ್ ಮಾಡಿದ್ದಾರೆ.

ಕೆ. ಎ. ಜಗದೀಶ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕರುಣಾನಿಧಿ ಅವರಿಗಿದ್ದ ದ್ರಾವಿಡ ಸಂಸ್ಕೃತಿ ಮತ್ತು ಭಾಷೆ ಮೇಲಿನ ಪ್ರೀತಿಯನ್ನು ಟ್ವೀಟ್ ಮೂಲಕ ಸ್ಮರಿಸಿದ್ದಾರೆ.

ಎಚ್‌.ಎ. ಶಂಕರನಾರಾಯಣ ಎಂಬುವರು ಕರುಣಾನಿಧಿ ಅವರುತನ್ನ ಮಾತೃ ಭಾಷೆ (ತಮಿಳು) ಬಿಟ್ಟು ಬೇರೆ ಭಾಷೆ ಮಾತನಾಡದ ಅತ್ಯಂತ ಪರಿಣಾಮಕಾರಿ ನಾಯಕ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.