ಲಖನೌ: ಟ್ರ್ಯಾಕ್ಟರ್ ಟ್ರಾಲಿ ಮಗುಚಿ ಕೊಳಕ್ಕೆ ಬಿದ್ದು, ಗಂಗಾ ನದಿಯಲ್ಲಿ ಸ್ನಾನಕ್ಕೆ ಹೋಗುತ್ತಿದ್ದವರಲ್ಲಿ 10 ಕುಟುಂಬಗಳ ಎಂಟು ಮಕ್ಕಳು ಸೇರಿ 23 ಜನರು ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಈ ಅವಘಡ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರೆಲ್ಲರೂ ಏಟ ಜಿಲ್ಲೆಯ ಜೈಥರಾ ಜಿಲ್ಲೆಯಿಂದ ಗಂಗಾ ಸ್ನಾನಕ್ಕೆ ಹೋಗುತ್ತಿದ್ದರು. ಪಟಿಯಾಲಿ ಪ್ರದೇಶದಲ್ಲಿ ಪಟಿಯಾಲಿ– ದರಿಯಾಗಂಜ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಗಾಯಗೊಂಡಿರುವ 20 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಎಂಟು ಮಕ್ಕಳು ಇದ್ದಾರೆ ಎಂದು ಅಲಿಗಢ ವಲಯ ಐಜಿಪಿ ಶಲಭ್ ಮಾಥುರ್ ತಿಳಿಸಿದ್ದಾರೆ.
ಒಂದೇ ಕುಟುಂಬದ 10 ಜನರು ಮೃತಪಟ್ಟಿದ್ದು ಒಬ್ಬ ಮಹಿಳೆ ಮಾತ್ರ ಇದ್ದಾರೆ. ಇವರು ಟ್ರ್ಯಾಕ್ಟರ್‌ನಲ್ಲಿ ತೆರಳದೇ ಮನೆಯಲ್ಲಿ ಇದ್ದರು. ಇದೇ ಕುಟುಂಬದ ಒಂದೂವರೆ ವರ್ಷದ ಮಗು ಕೂಡ ಮೃತಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಾಹನ ಹಿಂದಿಕ್ಕಲು ಚಾಲಕ ಪ್ರಯತ್ನಿಸಿದಾಗ ಟ್ರ್ಯಾಕ್ಟರ್ ನಿಯಂತ್ರಣ ಕಳೆದುಕೊಂಡು ಟ್ರ್ಯಾಲಿ ಮುಗುಚಿ 7ರಿಂದ 8 ಅಡಿ ಆಳದ ಕೊಳಕ್ಕೆ ಬಿದ್ದಿದೆ.
ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಮತ್ತು ಗಾಯಾಳುಗಳ ಕುಟುಂಬಗಳಿಗೆ ತಲಾ ₹50 ಸಾವಿರ ಹಣಕಾಸು ನೆರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಘೋಷಿಸಿದ್ದಾರೆ.
ಭಾನುವಾರ ಅಧಿಕಾರಿಗಳು ಹಾಗೂ ಸಚಿವರು ಸಂತ್ರಸ್ತರ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಕುಟುಂಬದವರಿಗೆ ಸಾಂತ್ವಾನ ಹೇಳಿದ್ದಾರೆ ಎಂದು ವರಿದಿಯಾಗಿದೆ.
ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಪಘಾತದಲ್ಲಿ ಸಂಭವಿಸಿದ ಜೀವ ಹಾನಿಯು ಅತ್ಯಂತ ಹೃದಯ ವಿದ್ರಾವಕ ವಾದುದು ಎಂದು ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.