ಶ್ರೀನಗರ: ದಕ್ಷಿಣ ಕಾಶ್ಮೀರದ ನಾಲ‌್ಕು ಜಿಲ್ಲೆಗಳಲ್ಲಿ ಹಲವು ಪೊಲೀಸರ ಮನೆಗಳನ್ನು ಗುರಿಯಾಗಿರಿಸಿ ದಾಳಿ ನಡೆಸಿರುವ ಉಗ್ರರು, ಆರು ಕುಟುಂಬಗಳ 11 ಜನರನ್ನು ಗುರುವಾರ ಸಂಜೆ ಅಪಹರಿಸಿದ್ದಾರೆ.ರಕ್ಷಣಾ ಪಡೆಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಉಗ್ರರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ರಕ್ಷಣಾ ಪಡೆಗಳು,ಕಳೆದ ಎರಡು ದಿನಗಳಲ್ಲಿ ಇಷ್ಟೇ ಸಂಖ್ಯೆಯ ಭಯೋತ್ಪಾದಕರು, ಸಂಬಂಧಿಕರನ್ನು ಬಂಧಿಸಿದ್ದವು.ಈ ಬೆಳವಣಿಗೆ ಬಳಿಕ ‘ಪೊಲೀಸರ ಕುಟುಂಬದವರನ್ನು ಅಪಹರಿಸಿರುವುದು ನಮ್ಮನ್ನುಒತ್ತಡಕ್ಕೆ ಸಿಲುಕಿಸುವತಂತ್ರ’ ಎಂದು ರಕ್ಷಣಾ ಸಿಬ್ಬಂದಿ ಹೇಳಿದ್ದಾರೆ.
ಪುಲ್ವಾಮ, ಅನಂತ್‌ನಾಗ್, ಅವಂತಿಪುರ ಮತ್ತು ಕುಲ್ಗಾಂ ಜಿಲ್ಲೆಗಳಲ್ಲಿ ಪೊಲೀಸರ ಮನೆಗಳಿಗೆ ನುಗ್ಗಿದ್ದ ಉಗ್ರರು ಕುಟುಂಬದವರನ್ನು ಅಪಹರಿಸಿದ್ದಾರೆ. ಪೊಲೀಸ್ ಸಿಬ್ಬಂದಿಯೊಬ್ಬರನ್ನು ಪಲ್ವಾಮಾ ಜಿಲ್ಲೆಯಲ್ಲಿ ಗುರುವಾರ ಅಪಹರಿಸಿದ್ದ ಉಗ್ರರು ಚೆನ್ನಾಗಿ ಥಳಿಸಿ, ಬೆದರಿಕೆ ಒಡ್ಡಿ ಬಳಿಕ ಬಿಡುಗಡೆ ಮಾಡಿದ್ದರು.
‘ಈ ಅಪಹರಣ ಪ್ರಕರಣಗಳು ಕಣಿವೆಯಲ್ಲಿನ ಅತ್ಯಂತ ಚಿಂತಾಜನಕ ಪರಿಸ್ಥಿತಿಯ ಪ್ರತಿಬಿಂಬವಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
ಈ ನಡುವೆ ಮಹಿಳೆಯೊಬ್ಬರು ತಮ್ಮ ಮಗನ ಬಿಡುಗಡೆಗಾಗಿ ಮೊರೆ ಇಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕುಟುಂಬದವರೂ ಮಗನ ಮೇಲೆ ಕರುಣೆ ತೋರುವಂತೆ ಮನವಿ ಮಾಡಿಕೊಳ್ಳುತ್ತಿರುವುದುಈ ವಿಡಿಯೊದಲ್ಲಿ ಸೆರೆಯಾಗಿದೆ.
‘ಸದ್ಯ ರಕ್ಷಣೆಯನ್ನು ಹೆಚ್ಚಿಸಲಾಗಿದ್ದು, ಅಪಹರಣಕ್ಕೊಳಗಾಗಿರುವವರ ಬಿಡುಗಡೆಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹಿರಿಯಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉಗ್ರರ ಸಂಬಂಧಿಕರ ಬಂಧನವನ್ನು ಖಂಡಿಸಿ ದಕ್ಷಿಣ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಬುಧವಾರ ಪ್ರತಿಭಟನೆಗಳು ನಡೆದಿದ್ದವು. ಇದೇ ಭಾಗದಲ್ಲಿದ್ದ ಇಬ್ಬರು ಉಗ್ರರ ಮನೆಗಳಿಗೆ ರಕ್ಷಣಾ ಸಿಬ್ಬಂದಿ ಬೆಂಕಿಹಚ್ಚಿದ್ದರು ಎನ್ನಲಾಗಿದೆ.ಸೋಫಿಯಾನ್‌ನಲ್ಲಿ ಉಗ್ರರು ಸಂಘಟಿಸಿದ್ದ ದಾಳಿ ವೇಳೆ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದರು. ಇದಾದ ಬಳಿಕ ರಕ್ಷಣಾ ಸಿಬ್ಬಂದಿ ಉಗ್ರರ ಮನೆಗಳಿಗೆ ಬೆಂಕಿ ಹಚ್ಚಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.
‘ಕಾಶ್ಮೀರಕ್ಕೆ ಉಗ್ರವಾದ ಕಾಲಿಟ್ಟ 28 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉಗ್ರರು ಈ ರೀತಿ ಪೊಲೀಸರ ಕುಟುಂಬಗಳ ಮೇಲೆ ಸೇಡಿನ ಕೃತ್ಯ ಎಸಗಿದ್ದಾರೆ’ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.