ಜಮ್ಮು: ವಿವಾಂಟ್ ಫ್ರೀಡಂ, ಐ ಲವ್ ಬುರ್ಹಾನ್ ವಾನಿ, ಜಕೀರ್ ಮೂಸಾ ಕಂ ಬ್ಯಾಕ್, ಗೋ ಬ್ಯಾಕ್ ಇಂಡಿಯಾ, ಪಾಕಿಸ್ತಾನ್, ಮೇರೇ ಜಾನ್ ಇಮ್ರಾನ್ಖಾನ್ -ಕಾಶ್ಮೀರದಿಂದ ಖರೀದಿಸಿದ ಸೇಬುಗಳ ಮೇಲೆ ಹೀಗೆ ಪಾಕ್ ಪರ ಘೋಷಣೆ ಬರೆಯಲಾಗಿದೆ.
ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಕಾಶ್ಮೀರದಲ್ಲಿನ ಸೇಬು ಖರೀದಿಗೆ ಬಹಿಷ್ಕಾರ ಹಾಕಲಿದ್ದೇವೆ ಎಂದು ಹಣ್ಣು ಮಾರಾಟಗಾರರು ಬೆದರಿಕೆಯೊಡ್ಡಿದ್ದಾರೆ. ಸೇಬು ಮೇಲೆ ಈ ರೀತಿ ಬರೆದಿರುವುದರಿಂದ ಗ್ರಾಹಕರು ಖರೀದಿಸುತ್ತಿಲ್ಲ ಎಂದಿದ್ದಾರೆ ಮಾರಾಟಗಾರರು.
ಕಾಶ್ಮೀರದ ಮಾರುಕಟ್ಟೆಯಿಂದ ಖರೀದಿಸಿ ಸೇಬು ಪೆಟ್ಟಿಗೆಯನ್ನು ತೆರೆದು ನೋಡಿದಾಗ ಸೇಬುಗಳ ಮೇಲೆ ಕಪ್ಪುಬಣ್ಣದ ಮಾರ್ಕರ್‌ನಿಂದ ಬರೆದ ಬರಹ ಪತ್ತೆಯಾಗಿತ್ತು.
ಕಠುವಾ ಸಗಟು ಮಾರುಕಟ್ಟೆಯ ಅಧ್ಯಕ್ಷ ರೋಹಿತ್ ಗುಪ್ತಾ ನೇತೃತ್ವದಲ್ಲಿ ಹಣ್ಣು ಮಾರಾಟಗಾರರು ಪ್ರತಿಭಟನೆ ನಡೆಸಿ ಪಾಕಿಸ್ತಾನ ಮತ್ತು ಉಗ್ರರ ವಿರುದ್ಧ ಘೋಷಣೆ ಕೂಗಿದ್ದಾರೆ.
ಕಾಶ್ಮೀರದಿಂದ ತಂದ ಸೇಬುಗಳ ಮೇಲೆ ಇಂಗ್ಲಿಷ್ ಮತ್ತು ಉರ್ದುನಲ್ಲಿ ಈ ರೀತಿ ಬರೆಯಲಾಗಿದೆ . ಈ ರೀತಿ ಕೃತ್ಯ ಮಾಡಿದವರ ವಿರುದ್ಧ ಸರ್ಕಾರ ಮತ್ತು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗುಪ್ತಾ ಒತ್ತಾಯಿಸಿದ್ದಾರೆ.
ಪ್ರಕರಣದಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೇಬು ಹಣ್ಣಿನ ವರ್ತಕನ ಹತ್ಯೆ
ಶ್ರೀನಗರ (ಪಿಟಿಐ): ಶೋಫಿಯಾನ್ ಜಿಲ್ಲೆಯಲ್ಲಿ ಬುಧವಾರ ಸಂಜೆ ನಡೆದ ಉಗ್ರರ ದಾಳಿಯಲ್ಲಿ ಪಂಜಾಬ್ ಮೂಲದ ಸೇಬು ಹಣ್ಣಿನ ವ್ಯಾಪಾರಿ ಚರಣ್‌ದೀಪ್ ಸಿಂಗ್ ಎಂಬುವರು ಹತರಾಗಿದ್ದು, ಸಂಜೀವ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜೆ 7.30ರ ವೇಳೆಗೆ ಬಂದ 3 ರಿಂದ 4 ಮಂದಿ ಉಗ್ರರು ಇವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗಾಯಗೊಂಡಿದ್ದ ಇಬ್ಬರನ್ನೂ ಕೂಡಲೇ ಪುಲ್ವಾಮಾದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತೀವ್ರವಾಗಿ ಗಾಯಗೊಂಡಿದ್ದ ಚರಣ್‌ದೀಪ್ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು. ಸಂಜೀವ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಇಂಥ ಮೂರನೇ ಘಟನೆ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.