ADVERTISEMENT

ಸತ್ಯವನ್ನು ಸಮಾಧಿ ಮಾಡಲು ಬಯಸಿದ್ದವರನ್ನು 'ಕಾಶ್ಮೀರ ಫೈಲ್ಸ್' ಕೆರಳಿಸಿದೆ: ಮೋದಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 16:01 IST
Last Updated 15 ಮಾರ್ಚ್ 2022, 16:01 IST
ಪ್ರಧಾನಿ ನರೇಂದ್ರ ಮೋದಿ: ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ: ಪಿಟಿಐ ಚಿತ್ರ   

ನವದೆಹಲಿ: ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂಗಳ ಕಥೆಯನ್ನು ಆಧರಿಸಿದ ಚಿತ್ರ 'ದಿ ಕಾಶ್ಮೀರ್ ಫೈಲ್ಸ್' ಅನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಚಿತ್ರವನ್ನು ಟೀಕಿಸುವವರ ವಿರುದ್ಧ ಕಿಡಿಕಾರಿದ್ದಾರೆ.

‘ತಾವು ಹತ್ತಿಕ್ಕಲು ಪ್ರಯತ್ನಿಸಿದ ಸತ್ಯಗಳು ಸಿನಿಮಾ ತಂಡದ ಪ್ರಯತ್ನದಿಂದ ಹೊರಬರುತ್ತಿವೆ ಎಂದು ಅವರು(ವಿರೋಧಿಗಳು) ಆಘಾತಕ್ಕೊಳಗಾಗಿದ್ದಾರೆ’ಎಂದು ಮೋದಿ ಹೇಳಿದ್ದಾರೆ. ಕಾಶ್ಮೀರ ಫೈಲ್ಸ್ ಸಿನಿಮಾವು ಇದೀಗ ಅದನ್ನು ಬೆಂಬಲಿಸುತ್ತಿರುವ ಬಿಜೆಪಿ ಮತ್ತು ವಿರೋಧಿಸುತ್ತಿರುವ ಕಾಂಗ್ರೆಸ್, ಇತರ ಪಕ್ಷಗಳ ನಡುವಿನ ಕೆಸರೆರಚಾಟಕ್ಕೆ ನಾಂದಿಯಾಗಿದೆ.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಚಿತ್ರದ ಬಗ್ಗೆ ಸುದೀರ್ಘವಾಗಿ ಮಾತನಾಡಿದ ಮೋದಿ, ದೇಶ ವಿಭಜನೆ ಮತ್ತು ತುರ್ತು ಪರಿಸ್ಥಿತಿಯ ಭೀಕರತೆಯನ್ನು ಚಿತ್ರಿಸುವ ಯಾವುದೇ ಪ್ರಯತ್ನಗಳು ಇಲ್ಲಿಯವರೆಗೆ ನಡೆದಿಲ್ಲ, ಏಕೆಂದರೆ, ಸತ್ಯವನ್ನು ಹೂತುಹಾಕಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ..

ADVERTISEMENT

'ಕಳೆದ ಕೆಲವು ದಿನಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಧ್ವಜವನ್ನು ಹಿಡಿದಿರುವವರು ‘ಕಾಶ್ಮೀರ ಫೈಲ್ಸ್’ಬಗ್ಗೆ ಚರ್ಚೆ ಮತ್ತು ಗದ್ದಲವೆಬ್ಬಿಸುತ್ತಿರುವುದನ್ನು ನೋಡಿದ್ದೀರಿ’ಎಂದು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೊದಲ್ಲಿ ಮೋದಿ ಹೇಳಿದ್ದಾರೆ.

‘ಸತ್ಯದ ಆಧಾರದ ಮೇಲೆ ಚಲನಚಿತ್ರವನ್ನು ನಿರ್ಣಯಿಸುವ ಬದಲು, ಅದರ ಬಗ್ಗೆ ಅಪಪ್ರಚಾರ ಮಾಡುವ ಅಭಿಯಾನ ನಡೆಯುತ್ತಿದೆ. ಸತ್ಯವನ್ನು ತೋರಿಸಲು ಪ್ರಯತ್ನಿಸುವ ಯಾರನ್ನಾದರೂ ಈ ರೀತಿಯ ಜನರು ವಿರೋಧಿಸುತ್ತಾರೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಪಿತೂರಿಯು ಸತ್ಯದ ಮೇಲೆ ಆಧರಿತವಾದ ಚಿತ್ರವನ್ನು ಯಾರೂ ನೋಡದಂತೆ ನೋಡಿಕೊಳ್ಳುವುದಾಗಿದೆ’ಎಂದು ಮೋದಿ ಟೀಕಿಸಿದರು.

ಸಮಾಜದ ಮುಂದೆ ಕಾಲಕಾಲಕ್ಕೆ ಇತಿಹಾಸವನ್ನು ಪ್ರಸ್ತುತಪಡಿಸಬೇಕು ಎಂದು ಒತ್ತಿ ಹೇಳಿದ ಮೋದಿ, ಪುಸ್ತಕಗಳು, ಕವನಗಳು ಮತ್ತು ಸಾಹಿತ್ಯದ ಜೊತೆಗೆ ಚಲನಚಿತ್ರಗಳು ಕೂಡ ಆ ಕೆಲಸ ಮಾಡುತ್ತವೆ ಎಂದರು.

‘ನನ್ನ ಕಾಳಜಿ ಕೇವಲ ಚಿತ್ರದ ಬಗ್ಗೆ ಅಲ್ಲ, ಅದರಲ್ಲಿ ಸತ್ಯವನ್ನು ಅದರ ಸರಿಯಾದ ರೂಪದಲ್ಲಿ ದೇಶದ ಮುಂದೆ ತಂದಿರುವುದು’ ಎಂದು ಹೇಳಿದರು.

ಸತ್ಯದ ಪರವಾಗಿ ನಿಲ್ಲುವ ಜವಾಬ್ದಾರಿಯೂ ನಮ್ಮ ಮೇಲೆ ಇದೆ ಎಂದು ಪ್ರತಿಪಾದಿಸಿದ ಅವರು, ಪ್ರತಿಯೊಬ್ಬರೂ ಇದನ್ನು ಒಪ್ಪುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಮೋದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.