ಶ್ರೀನಗರ: ಕಾಶ್ಮೀರದಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಆರು ವಾರಗಳಿಂದ ಸ್ಥಗಿತಗೊಂಡಿವೆ. ಕಾಶ್ಮೀರದ ಹೊರಗಿನ ಕಾರ್ಮಿಕರು ವಾಪಸ್ ಹೋಗಿರುವುದು ಇದಕ್ಕೆ ಕಾರಣ.
ನೀರು ಪೂರೈಕೆಯ ನೂರಾರು ಯೋಜನೆಗಳ ಕಾಮಗಾರಿ ಆರಂಭವಾಗಿತ್ತು. ಆದರೆ, ಕಾಶ್ಮೀರದ ವಿಶೇಷಾಧಿಕಾರ ರದ್ದತಿಯ ಬಳಿಕ ಹೊರಗಿನ ಕಾರ್ಮಿಕರು ತಮ್ಮ ಊರುಗಳಿಗೆ ಹೊರಟು ಹೋದರು. ಪರಿಣಾಮವಾಗಿ ಈ ಎಲ್ಲ ಕಾಮಗಾರಿ ನಿಂತಿವೆ. ಇದು ₹1,400 ಕೋಟಿಯ ಯೋಜನೆ.
ಸಮಗ್ರ ನೀರು ನಿರ್ವಹಣಾ ಯೋಜನೆ ಅಡಿಯಲ್ಲಿ ಜೇಲಂ ನದಿಯ ಹೂಳೆತ್ತುವ ಕಾಮಗಾರಿ ನಿಂತು ಹೋಗಿದೆ. ₹399 ಕೋಟಿ ವೆಚ್ಚದ ಈ ಕಾಮಗಾರಿ ನಿಲ್ಲುವುದಕ್ಕೂ ಕಾರ್ಮಿಕರ ಕೊರತೆಯೇ ಕಾರಣ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ (12ನೇ ಹಂತ) ಅಡಿಯಲ್ಲಿ ಕಾಶ್ಮೀರ ಮತ್ತು ಲಡಾಖ್‌ನಲ್ಲಿ 1,734 ಕಿ.ಮೀ. ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರ ವೆಚ್ಚ ₹1,487 ಕೋಟಿ. ಆಗಸ್ಟ್‌ವರೆಗೆ 300 ಕಿ.ಮೀ. ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಬಳಿಕ, ಕಾಮಗಾರಿ ಸ್ಥಗಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಶಾಲಾ ಶಿಕ್ಷಣ ಇಲಾಖೆಗೆ ವಿಶ್ವಬ್ಯಾಕ್‌ನಿಂದ ₹30 ಕೋಟಿ ಅನುದಾನ ಬಂದಿದೆ. ಉನ್ನತ ಶಿಕ್ಷಣ ಇಲಾಖೆಯ ವಿವಿಧ ಯೋಜನೆಗಳಿಗೆ ₹35 ಕೋಟಿ ಬಿಡುಗಡೆಯಾಗಿದೆ. ಈ ಎಲ್ಲ ಯೋಜನೆಗಳನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ.
ಕಾಶ್ಮೀರದಲ್ಲಿ ಕೆಲಸ ಮಾಡುವ ಕುಶಲ ಕಾರ್ಮಿಕರು ಮತ್ತು ಕಾರ್ಮಿಕರು ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಪಂಜಾಬ್‌ನಿಂದ ವಲಸೆ ಬಂದವರು. ವಿಶೇಷಾಧಿಕಾರ ರದ್ದತಿ ಬಳಿಕ ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಡಬಹುದು ಎಂಬ ಕಾರಣಕ್ಕೆ ಅವರೆಲ್ಲ ತಮ್ಮ ಊರುಗಳಿಗೆ ಮರಳಿದ್ದಾರೆ.
ಕಾಶ್ಮೀರದಲ್ಲಿ ಉಳಿಯುವಂತೆ ವಲಸೆ ಕಾರ್ಮಿಕರ ಮನವೊಲಿಸುವ ಎಲ್ಲ ಪ್ರಯತ್ನಗಳನ್ನೂ ನಡೆಸಲಾಗಿದೆ. ಆದರೆ, ಅದು ಫಲ ನೀಡಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸ್ಥಳೀಯರನ್ನು ಬಳಸಿಕೊಂಡು ಕಾಮಗಾರಿ ಮುಂದುವರಿಸುವ ಪ್ರಯತ್ನವೂ ವಿಫಲವಾಗಿದೆ. ವಲಸೆ ಕಾರ್ಮಿಕರಿಗೆ ನೀಡುತ್ತಿದ್ದುದರ ಮೂರು ಪಟ್ಟು ಕೂಲಿ ಕೊಡುವಂತೆ ಸ್ಥಳೀಯರು ಕೇಳುತ್ತಿದ್ದಾರೆ. ಇದನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಗುತ್ತಿಗೆದಾರ
ರೊಬ್ಬರು ಹೇಳಿದ್ದಾರೆ.
ವಿಶೇಷಾಧಿಕಾರ ರದ್ದು: ಜಮೀಯತ್ ಬೆಂಬಲ
ನವದೆಹಲಿ: ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ಪ್ರಮುಖ ಮುಸ್ಲಿಂ ಸಂಘಟನೆ ‘ಜಮೀಯತ್ ಉಲೆಮಾ–ಎ–ಹಿಂದ್’ (ಜೆಯುಎಚ್) ಅಭಿಪ್ರಾಯಪಟ್ಟಿದೆ. ಸಂಘಟನೆಯ ವಾರ್ಷಿಕ ಸಭೆಯಲ್ಲಿ ಈ ಕುರಿತ ನಿರ್ಣಯವನ್ನು ಸಂಘಟನೆ ಅನುಮೋದಿಸಿದೆ.
‘ಭಾರತದೊಂದಿಗೆ ಸಂಪೂರ್ಣವಾಗಿ ವಿಲೀನವಾಗುವಲ್ಲಿ ಕಾಶ್ಮೀರದ ಅಭಿವೃದ್ಧಿಯ ಮಂತ್ರ ಅಡಗಿದೆ. ಆದರೆ ಕಾಶ್ಮೀರದ ನಾಶಕ್ಕೆ ವಿರೋಧಿ ಗುಂಪುಗಳು ಹಾಗೂ ನೆರೆಯ ದೇಶ ಮುಂದಾಗಿವೆ. ಕಾಶ್ಮೀರದ ತುಳಿತಕ್ಕೊಳದಾದ ಜನರು ವಿರೋಧಿಗಳ ಮಧ್ಯೆ ಸಿಲುಕಿಕೊಂಡಿದ್ದಾರೆ’ ಎಂದು 370ನೇ ವಿಧಿಯನ್ನು ಪ್ರಸ್ತಾಪಿಸದೇ ಉಲ್ಲೇಖಿಸಲಾಗಿದೆ.
ಪಕ್ಕದ ದೇಶವು ಕಾಶ್ಮೀರಿಗಳನ್ನು ಗುರಾಣಿಗಳಂತೆ ಬಳಸಿಕೊಂಡಿದೆ ಎಂದು ಪಾಕಿಸ್ತಾನದ ಹೆಸರು ಹೇಳದೇ ತರಾಟೆಗೆ ತೆಗೆದುಕೊಂಡಿರುವ ಜಮೀಯತ್, ಪ್ರತ್ಯೇಕತಾವಾದಿಗಳಿಗೆ ಎಂದಿಗೂ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಸೂದೆಯಲ್ಲಿ 52 ತಪ್ಪುಗಳು
ಜಮ್ಮು–ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವ ಕಾಯ್ದೆ ಒಟ್ಟು 52 ಪುಟಗಳಿವೆ. ಅದರಲ್ಲಿ ಇರುವ ತಪ್ಪುಗಳ ಸಂಖ್ಯೆ ಕೂಡ ಒಟ್ಟು 52. ಕಾನೂನು ಸಚಿವಾಲಯವು ತರಾತುರಿಯಲ್ಲಿ ಸಿದ್ಧಪಡಿಸಿದ ಮಸೂದೆಯು ಈಗ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ. ಕಾಯ್ದೆಯ ಅಧಿಸೂಚನೆ ಪ್ರಕಟವಾದ 34 ದಿನಗಳ ಬಳಿಕ ಈಗ ಮೂರು ಪುಟಗಳ ತಿದ್ದುಪಡಿಯನ್ನು ಪ್ರಕಟಿಸಲಾಗಿದೆ.
ರಾಜ್ಯಸಭೆಯಲ್ಲಿ ಆ. 5ರಂದು ಅಂಗೀಕಾರವಾದ ಮಸೂದೆಯಲ್ಲಿ ಈ 52 ತಪ್ಪುಗಳು ಇದ್ದವು. ಇದರಲ್ಲಿ ಅಕ್ಷರ ತಪ್ಪುಗಳ ಜತೆಗೆ ತಪ್ಪು ಮಾಹಿತಿಯೂ ಸೇರಿಕೊಂಡಿತ್ತು. ಆ. 9ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಗುರುವಾರ ತಿದ್ದುಪಡಿಯನ್ನು ಪ್ರಕಟಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.