ADVERTISEMENT

ಕಾಶ್ಮೀರ: ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು, ಹೋಮ್‌ಸ್ಟೇಗಳಿಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 14:44 IST
Last Updated 31 ಮಾರ್ಚ್ 2024, 14:44 IST
ಕಾಶ್ಮೀರ 
ಕಾಶ್ಮೀರ    

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ಬರತೊಡಗಿದ್ದು, ಅಲ್ಲಿನ ಪ್ರವಾಸಿಗರ ಮೂಲಸೌಕರ್ಯವೂ ಹೆಚ್ಚು ಹೆಚ್ಚು ಅಭಿವೃದ್ಧಿ ಕಾಣುತ್ತಿದೆ. ಇದೀಗ ಜಮ್ಮು–ಕಾಶ್ಮೀರದ ಸ್ಥಳೀಯ ಜನರು ತಮ್ಮ ವಸತಿ ಇರುವ ಸ್ಥಳಗಳಲ್ಲಿಯೇ ಹೋಮ್‌ಸ್ಟೇಗಳನ್ನು (ಪ್ರವಾಸಿಗರ ವಾಸತಾಣ) ಪ್ರಾರಂಭಿಸುತ್ತಿದ್ದಾರೆ. ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯಲ್ಲಿ ಬರೋಬ್ಬರಿ 12,000 ಹೋಮ್‌ಸ್ಟೇ ಹಾಸಿಗೆಗಳನ್ನು ನೋಂದಾಯಿಸಲಾಗಿದೆ ಎಂದು ಇಲಾಖೆಯ ನಿರ್ದೇಶಕ ರಾಜಾ ಯಾಕೂಬ್‌ ಫಾರೂಕ್‌ ಬಹಿರಂಗಪಡಿಸಿದ್ದಾರೆ.

ಸ್ಥಳೀಯರೇ ಹೋಮ್‌ಸ್ಟೇ ಪ್ರಾರಂಭಿಸುವುದರಿಂದ ಒಂದೆಡೆ ಪ್ರವಾಸಿಗರ ವಸತಿ ವೆಚ್ಚ ಅಗ್ಗವಾಗುವುದಲ್ಲದೇ ಸ್ಥಳೀಯರಿಗೂ ಆರ್ಥಿಕ ಸಹಾಯ ಸಿಗಲಿದೆ. 

ಜಮ್ಮು–ಕಾಶ್ಮೀರಕ್ಕೆ ಬರುತ್ತಿದ್ದ ಪ್ರವಾಸಿಗರು ಈವರೆಗೆ ತಮ್ಮ ವಸತಿ ಮತ್ತು ಇತರ ಮೂಲಸೌಕರ್ಯಗಳಿಗಾಗಿ ಪ್ರಮುಖ ನಗರಗಳು ಮತ್ತು ಪಟ್ಟಣಗಳ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳನ್ನೇ ಅವಲಂಬಿಸಬೇಕಿತ್ತು. 

ADVERTISEMENT

‘ಮಿಷನ್‌ ಯೂತ್‌’ ಯೋಜನೆಯಡಿಯಲ್ಲಿ ಹೋಮ್‌ಸ್ಟೇಗಳನ್ನು ಸ್ಥಾಪಿಸಲು ಇಚ್ಛಿಸುವ ಯುವಕ–ಯುವತಿಯರಿಗೆ ಸರ್ಕಾರ ₹50,000 ಸಹಾಯಧನ ನೀಡುತ್ತದೆ. 

ಕಾಶ್ಮೀರದ ಕೇರಾನ್‌, ತಂಗಘಾರ್, ಬಂಗಸ್‌ ಕಣಿವೆ, ಗುರೇಜ್‌, ದಾವರ್‌ ಮತ್ತು ಉರಿ ಸೇರಿದಂತೆ ಹಲವಾರು ಗಡಿಪ್ರದೇಶಗಳಲ್ಲಿ ಹೋಮ್‌ಸ್ಟೇ ಪ್ರಾರಂಭಿಸುವತ್ತ ಜನರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಹೋಮ್‌ಸ್ಟೇಗಳಿಗೆ ಭೇಟಿ ನೀಡಿದ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಫಾರೂಕ್‌ ತಿಳಿಸಿದರು. 

ಸ್ಥಳೀಯರು ತಮ್ಮ ಹೋಮ್‌ಸ್ಟೇಗಳಿಗೆ ಬರುವ ಪ್ರವಾಸಿಗರನ್ನು ಬಹಳ ಆದರದಿಂದ ಕಾಣುತ್ತಾರೆ ಮತ್ತು ಅತಿಥಿಗಳಿಗೆ ಉತ್ತಮ ಸೇವೆ ನೀಡುತ್ತಾರೆ. ಹೋಮ್‌ಸ್ಟೇಗಳು ಪ್ರವಾಸಿಗರಿಗೆ ಕೇವಲ ವಸತಿ ತಾಣಗಳಲ್ಲದೇ ಸ್ಥಳೀಯ ಆಹಾರ, ಸಂಸ್ಕೃತಿ ಮತ್ತು ಆಚರಣೆಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.