ADVERTISEMENT

ರಕ್ಷಣೆಗಾಗಿ ಪಂಡಿತರ ಕೂಗು: ಸರ್ಕಾರ ನಮ್ಮನ್ನು ಕೂಡಿಹಾಕಿದೆ ಎಂದು ಆರೋಪ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 1:10 IST
Last Updated 4 ಜೂನ್ 2022, 1:10 IST
ಶಿಕ್ಷಕನ ಹತ್ಯೆ ಖಂಡಿಸಿ ಕಾಶ್ಮೀರಿ ಪಂಡಿತರ ಪ್ರತಿಭಟನೆ: ಪಿಟಿಐ ಚಿತ್ರ
ಶಿಕ್ಷಕನ ಹತ್ಯೆ ಖಂಡಿಸಿ ಕಾಶ್ಮೀರಿ ಪಂಡಿತರ ಪ್ರತಿಭಟನೆ: ಪಿಟಿಐ ಚಿತ್ರ   

ಶ್ರೀನಗರ: ‘ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರಿಗೆ ಭದ್ರತೆ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕಾಶ್ಮೀರಿ ಪಂಡಿತರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಿ’ ಎಂದು ಕಾಶ್ಮೀರಿ ಪಂಡಿತ ಸಂಘರ್ಷ ಸಮಿತಿಯು ಜಮ್ಮು–ಕಾಶ್ಮೀರ–ಲಡಾಖ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಸರ್ಕಾರವು ನಮ್ಮನ್ನು ಕೂಡಿ ಹಾಕಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಸಮಿತಿಯ ಅಧ್ಯಕ್ಷ ಸಂಜಯ್ ಕೆ. ಟಿಕ್ಕೋ ಅವರು, ಹೈಕೋರ್ಟ್‌ಗೆ ಇ–ಮೇಲ್‌ ಮೂಲಕ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ. ‘ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಮಾಡಿಕೊಂಡು ಉಗ್ರರು ಹತ್ಯೆ ನಡೆಸುತ್ತಿದ್ದಾರೆ.2020ರ ಜೂನ್‌ 8ರಿಂದ ಆರಂಭವಾಗಿ ಇದೇ ಮೇ 31ರವರೆಗೆ ಸ್ಥಳೀಯ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ 12 ಜನರ ಮೇಲೆ ಇಂತಹ ದಾಳಿ ನಡೆದಿದೆ. ಇದರಲ್ಲಿ 11 ಜನರು ಮೃತಪಟ್ಟಿದ್ದಾರೆ. ಈ ವಾರದಲ್ಲಿ ಮೂವರು ಮುಸ್ಲಿಮೇತರರನ್ನು ಉಗ್ರರು ಕೊಂದಿದ್ದಾರೆ. ನಮ್ಮನ್ನು ರಕ್ಷಿಸಿ’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

‘ಕಾಶ್ಮೀರ ಕಣಿವೆಯಲ್ಲಿ ಪಂಡಿತರಿಗೆ ಭದ್ರತೆ ಇಲ್ಲ. ಇಲ್ಲಿ ಸುರಕ್ಷಿತವಾಗಿ ಬದುಕುತ್ತೇವೆ ಎಂಬ ನಂಬಿಕೆಯೇ ಇಲ್ಲ. ಸುರಕ್ಷಿತ ಪ್ರದೇಶಗಳಿಗೆ ಹೋಗಲು ನಾವು ಸಿದ್ಧರಿದ್ದೇವೆ. ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಕಾಶ್ಮೀರಿ ಪಂಡಿತರು ಇರುವ ಶಿಬಿರಗಳ ದ್ವಾರಗಳನ್ನು ಸರ್ಕಾರವು ಮುಚ್ಚಿದೆ. ನಾವು ಹೊರಹೋಗುವುದನ್ನುತಡೆದಿದೆ. ಸರ್ಕಾರ ನಮ್ಮನ್ನು ಕೂಡಿಹಾಕಿದೆ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ADVERTISEMENT

‘ಶಿಬಿರಗಳಿಂದ ಹೊರಗೆ ನೆಲೆ ಕಂಡುಕೊಂಡಿದ್ದವರು, ಈಗಾಗಲೇ ಕಾಶ್ಮೀರ ಕಣಿವೆ ತೊರೆದಿದ್ದಾರೆ. ಸುರಕ್ಷಿತ ಪ್ರದೇಶಗಳಿಗೆ ಹೋಗಿದ್ದಾರೆ. ಆದರೆ ಶಿಬಿರಗಳಲ್ಲಿ ಇದ್ದವರು ಇಲ್ಲೇ ಉಳಿಯುವಂತಾಗಿದೆ. ಶಿಬಿರದಲ್ಲಿ ಇದ್ದವರು ಹೊರಗೆ ಹೋಗುವುದನ್ನು ತಡೆಯುವ ಸಲುವಾಗಿ ಕೇಂದ್ರೀಯ ಮೀಸಲು ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ. ಶಿಬಿರದ ಬೇಲಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಕಾಶ್ಮೀರಿ ಪಂಡಿತರನ್ನು ಸರ್ಕಾರವು ಕೂಡಿ ಹಾಕಿದೆ ಎಂದು ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆ ಕೂಡ ವರದಿ ಮಾಡಿದೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗೆಬುಧವಾರ ಬರೆದಿದ್ದ ಪತ್ರದಲ್ಲೂ, ‘ಸರ್ಕಾರ ನಮ್ಮನ್ನು ಕೂಡಿ ಹಾಕಿದೆ’ ಎಂದು ಆರೋಪಿಸಲಾಗಿತ್ತು.

‘ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕನ್ನು ನೀಡಲಾಗಿದೆ. ಆದರೆ, ನಾವು ಸುರಕ್ಷಿತ ಪ್ರದೇಶಕ್ಕೆ ಹೋಗುವುದನ್ನು ತಡೆಯುವ ಮೂಲಕ ಜೀವಿಸುವ ಹಕ್ಕನ್ನು ನಿರಾಕರಿಸಲಾಗಿದೆ. ಈ ವಿಧಿಯ ಅಡಿ ನೀಡಲಾದ ಜೀವಿಸುವ ಹಕ್ಕು ನಮಗೆ ಲಭ್ಯವಾಗುವಂತೆ ಮಾಡಿ. ಕಾಶ್ಮೀರ ಕಣಿವೆ ಹೊರತುಪಡಿಸಿ, ದೇಶದಯಾವ ಮೂಲೆಯಲ್ಲಾದರೂ ಆಶ್ರಯ ಕಲ್ಪಿಸಲಿ. ಅಲ್ಲಿಗೆನಾವು ಹೋಗುತ್ತೇವೆ’ ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ತನಿಖೆಗೆ ಆಗ್ರಹ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಪ್ತರಾಗಿದ್ದು, ಕಾಶ್ಮೀರದಲ್ಲಿ ನಿಯೋಜನೆಯಾಗಿದ್ದ ಹಲವು ಅಧಿ
ಕಾರಿಗಳು ಮೇ 12ರ ನಂತರ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ದಾಳಿಯ ಮುನ್ಸೂಚನೆ ಇದ್ದುದರಿಂದಲೇ ಸಾಮೂಹಿಕ ವರ್ಗಾವಣೆ ನಡೆದಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.

ಅಧಿಕಾರಿಗಳ ಜತೆ ಅಮಿತ್ ಶಾ ಸಭೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು–ಕಾಶ್ಮೀರದಲ್ಲಿನ ಸರಣಿ ಹತ್ಯೆಗಳ ಬಗ್ಗೆ ಶುಕ್ರವಾರ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಸಂಬಂಧ ಶಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಜಮ್ಮು–ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಇತರ ಹಿರಿಯ ಅಧಿಕಾರಿಗಳ ಜತೆಗೆ ದೆಹಲಿಯಲ್ಲಿ ಸಭೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.