ADVERTISEMENT

ಕಥುವಾ: ಉಗ್ರರ ಪತ್ತೆಗೆ ಜಂಟಿ ಕಾರ್ಯಾಚರಣೆ

ಹೆಲಿಕಾಪ್ಟರ್‌, ಯುಎವಿ, ಶ್ವಾನಗಳನ್ನು ಬಳಸಿ ಸೇನೆಯಿಂದ ಕಾರ್ಯಾಚರಣೆ

ಪಿಟಿಐ
Published 9 ಜುಲೈ 2024, 15:55 IST
Last Updated 9 ಜುಲೈ 2024, 15:55 IST
<div class="paragraphs"><p>ಸೇನೆಯ ವಾಹನಗಳ ಮೇಲೆ ದಾಳಿ ನಡೆಸಿದ್ದ ಉಗ್ರರ ಶೋಧಕ್ಕಾಗಿ ಜಮ್ಮು–ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸೇನೆ ಮಂಗಳವಾರ ಕಾರ್ಯಾಚರಣೆ ನಡೆಸಿತು  </p></div>

ಸೇನೆಯ ವಾಹನಗಳ ಮೇಲೆ ದಾಳಿ ನಡೆಸಿದ್ದ ಉಗ್ರರ ಶೋಧಕ್ಕಾಗಿ ಜಮ್ಮು–ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸೇನೆ ಮಂಗಳವಾರ ಕಾರ್ಯಾಚರಣೆ ನಡೆಸಿತು

   

–ಪಿಟಿಐ ಚಿತ್ರ 

ಜಮ್ಮ: ಜಮ್ಮು–ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆಸಿರುವ ಉಗ್ರರ ಪತ್ತೆಗಾಗಿ ಸೇನೆಯು ಮಂಗಳವಾರ ಜಂಟಿ ಶೋಧ ಕಾರ್ಯ ಆರಂಭಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಹೆಲಿಕಾಪ್ಟರ್ ಹಾಗೂ ಮಾನವರಹಿತ ವೈಮಾನಿಕ ವಾಹನಗಳ (ಯುಎವಿ) ನೆರವಿನೊಂದಿಗೆ ಸೇನೆಯು ಕಣ್ಗಾವಲನ್ನು ತೀವ್ರಗೊಳಿಸಿದೆ. ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶವು ದಟ್ಟ ಅರಣ್ಯದಿಂದ ಕೂಡಿರುವ ಕಾರಣ, ಲೋಹ ಪತ್ತೆ ಸಾಧನಗಳು, ವಾಸನೆ ಗ್ರಹಿಸುವ ಶ್ವಾನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡಿಜಿಪಿ ಆರ್‌.ಆರ್‌.ಸ್ವೇನ್‌ ಅವರು ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ತೆರಳಿದ್ದಾರೆ. ಎಡಿಜಿಪಿ ಆನಂದ್ ಜೈನ್‌ ಕೂಡ ಸ್ವೇನ್‌ ಅವರೊಂದಿಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶದ ವೈಮಾನಿಕ ಸಮೀಕ್ಷೆಯನ್ನೂ ನಡೆಸಿದ್ದಾರೆ.

ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಗಳಾದ ಮಚೇಡಿ, ಕಿಂಡ್ಲಿ ಹಾಗೂ ಲೋಹಾಯ್ ಮಲ್ಹಾರ್ ಪ್ರದೇಶಗಳನ್ನು ಸೇನೆ, ಜಮ್ಮು–ಕಾಶ್ಮೀರ ಪೊಲೀಸರು ಹಾಗೂ ಸಿಆರ್‌ಪಿಎಫ್‌ ಸಿಬ್ಬಂದಿ ಸುತ್ತುವರಿದಿದ್ದು, ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

ಕಾರ್ಯಾಚರಣೆಯನ್ನು ನೆರೆಯ ಜಿಲ್ಲೆಗಳಾದ ಉಧಂಪುರ, ಬಸಂತಗಢವಲ್ಲದೇ, ಎತ್ತರದ ಪ್ರದೇಶಗಳಾದ ಸೆಯೋಜ್‌, ಬನಿ, ದಗ್ಗರ್ ಹಾಗೂ ಕಿಂಡ್ಲಿಗಳಿಗೂ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

3–4 ಉಗ್ರರು ಈ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ತಿಳಿಸಿರುವ ಮೂಲಗಳು, ಈ ಉಗ್ರರೆಲ್ಲಾ ಬಹುತೇಕ ವಿದೇಶಿಯರು ಎಂದು ಹೇಳಿವೆ. ಬಸನ್‌ಗಢದಲ್ಲಿ ಗ್ರಾಮ ರಕ್ಷಕ ಮೊಹ್ಮದ್‌ ಷರೀಫ್‌ ಅವರ ಹತ್ಯೆ ಮಾಡಿದ್ದ ಉಗ್ರರ ಗುಂಪಿನ ಸದಸ್ಯರೂ ಆಗಿದ್ದಾರೆ ಎಂದು ಹೇಳಿವೆ.

ಮಚೇಡಿ–ಕಿಂಡ್ಲಿ–ಮೊಲ್ಹಾರ್‌ ರಸ್ತೆಯಲ್ಲಿ ಯೋಧರು ಗಸ್ತು ತಿರುಗುತ್ತಿದ್ದಾಗ ಭಯೋತ್ಪಾದಕರು ಸೋಮವಾರ ಗ್ರೆನೇಡ್‌ ಮತ್ತು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಗಾಯಗೊಂಡಿದ್ದ 10 ಮಂದಿ ಯೋಧರ ಪೈಕಿ, ಐವರು ಮೃತಪಟ್ಟಿದ್ದರು.

ಹಸ್ತಾಂತರ: ದಾಳಿಯಲ್ಲಿ ಹುತಾತ್ಮರಾದ ಯೋಧರ ದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಬಿಲ್ಲಾವರದ ಹೆಚ್ಚುವರಿ ಜಿಲ್ಲಾಧಿಕಾರಿ ವಿನಯ್‌ ಖೋಸ್ಲಾ ತಿಳಿಸಿದ್ದಾರೆ.

ಗಾಯಗೊಂಡವರ ಪೈಕಿ, 8 ಯೋಧರನ್ನು ಬಿಲ್ಲಾವರ ಆಸ್ಪತ್ರೆಗೆ ಹಾಗೂ 6 ಯೋಧರನ್ನು ಪಠಾಣ್‌ಕೋಟ್‌ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಸೇನೆಯ ವಾಹನಗಳ ಮೇಲೆ ದಾಳಿ ನಡೆಸಿದ್ದ ಉಗ್ರರ ಶೋಧಕ್ಕಾಗಿ ಜಮ್ಮು–ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸೇನೆ ಮಂಗಳವಾರ ಕಾರ್ಯಾಚರಣೆ ನಡೆಸಿತು –ಪಿಟಿಐ ಚಿತ್ರ 

ಕಥುವಾದಲ್ಲಿ ಉಗ್ರರ ದಾಳಿಗೆ ಐವರು ಧೀರ ಯೋಧರು ಹುತಾತ್ಮರಾಗಿದ್ದಕ್ಕೆ ದುಃಖಿತನಾಗಿದ್ಧೇನೆ. ಜಮ್ಮು–ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸಶಸ್ತ್ರ ಪಡೆಗಳು ದೃಢಸಂಕಲ್ಪ ಮಾಡಿವೆ
ರಾಜನಾಥ್‌ ಸಿಂಗ್ ರಕ್ಷಣಾ ಸಚಿವ

ಪ್ರತೀಕಾರ ನಿಶ್ಚಿತ: ಗಿರಿಧರ ಅರಮನೆ ನವದೆಹಲಿ(ಪಿಟಿಐ): ಜಮ್ಮು–ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ದಾಳಿ ನಡೆಸಿ ಐವರು ಯೋಧರನ್ನು ಹತ್ಯೆ ಮಾಡಿರುವ ಉಗ್ರರ ಕೃತ್ಯಕ್ಕೆ ತಕ್ಕ ಉತ್ತರ ನೀಡಲಾಗುವುದು. ಭಾರತ ಇಂತಹ ದುಷ್ಟ ಶಕ್ತಿಗಳನ್ನು ದಮನ ಮಾಡಲಿದೆ ಎಂದು ರಕ್ಷಣಾ ಕಾರ್ಯದರ್ಶಿ ಗಿರಿಧರ ಅರಮನೆ ಮಂಗಳವಾರ ಹೇಳಿದ್ದಾರೆ. ಉಗ್ರರ ದಾಳಿಯಲ್ಲಿ ಐವರು ಯೋಧರು ಪ್ರಾಣ ಕಳೆದುಕೊಂಡಿರುವ ಕುರಿತು ಅತೀವ ದುಃಖ ವ್ಯಕ್ತಪಡಿಸಿರುವ ಅವರು ‘ದೇಶಕ್ಕಾಗಿ ಯೋಧರು ಸಲ್ಲಿಸಿರುವ ನಿಸ್ವಾರ್ಥ ಸೇವೆ ಸದಾ ಸ್ಮರಿಸಲಾಗುವುದು. ಅವರ ತ್ಯಾಗಕ್ಕೆ ಪ್ರತೀಕಾರ ತೀರಿಸಿಕೊಳ್ಳದೇ ಬಿಡುವುದಿಲ್ಲ’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ದಿಟ್ಟ ಪ್ರತ್ಯುತ್ತರ ಅಗತ್ಯ: ರಾಷ್ಟ್ರಪತಿ ಮುರ್ಮು ನವದೆಹಲಿ(ಪಿಟಿಐ): ಸೇನೆಯ ಗಸ್ತು ವಾಹನಗಳ ಮೇಲೆ ದಾಳಿ ನಡೆಸಿರುವ ಉಗ್ರರದು ‘ಹೇಡಿತನ ಕೃತ್ಯ’ ಎಂದು ಹೇಳಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ‘ಇಂತಹ ಕೃತ್ಯಗಳನ್ನು ಬಲವಾಗಿ ಖಂಡಿಸುವ ಜೊತೆಗೆ ಉಗ್ರವಾದ ಮಟ್ಟಹಾಕಲು ದಿಟ್ಟ ಪ್ರತ್ಯುತ್ತರ ಅಗತ್ಯ’ ಎಂದು ಮಂಗಳವಾರ ಹೇಳಿದ್ದಾರೆ. ಈ ದಾಳಿ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು ಹುತಾತ್ಮರಾದ ಯೋಧರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಗಾಯಗೊಂಡಿರುವ ಯೋಧರು ಶೀಘ್ರ ಗುಣರಾಗಲಿ ಎಂದು ಹಾರೈಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು 

ತನಿಖೆಗೆ ಎನ್‌ಐಎ ನೆರವು

ನವದೆಹಲಿ: ಕಥುವಾ ಜಿಲ್ಲೆಯಲ್ಲಿ ಸೇನೆ ವಾಹನ ಮೇಲೆ ನಡೆದ ಉಗ್ರರ ದಾಳಿ ಕುರಿತು ತನಿಖೆ ನಡೆಸುತ್ತಿರುವ ಜಮ್ಮು–ಕಾಶ್ಮೀರ ಪೊಲೀಸರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ನೆರವು ನೀಡಲಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಈ ಸಂಬಂಧ ಅಧಿಕಾರಿಗಳನ್ನು ಒಳಗೊಂಡ ತಂಡವೊಂದನ್ನು ಎನ್‌ಐಎ ಜಮ್ಮು–ಕಾಶ್ಮೀರಕ್ಕೆ ಕಳುಹಿಸಿಕೊಟ್ಟಿದೆ. ‘ಉಗ್ರರ ದಾಳಿಗೆ ಸಂಬಂಧಿಸಿ ಜಮ್ಮು–ಕಾಶ್ಮೀರ ಪೊಲೀಸರು ತನಿಖೆ ನಡೆಸುತ್ತಿದ್ದು ಅವರಿಗೆ ಸಾಧ್ಯವಿರುವ ಎಲ್ಲ  ನೆರವನ್ನು ಎನ್‌ಐಎ ನೀಡಲಿದೆ. ಆದರೆ ಉಗ್ರರ ದಾಳಿ ಕುರಿತು ತನಿಖೆ ನಡೆಸುವುದಕ್ಕಾಗಿ ಸಂಸ್ಥೆ ಯಾವುದೇ ಪ್ರಕರಣ ದಾಖಲಿಸಿಲ್ಲ’ ಎಂದು ಎನ್‌ಐಎ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.