ADVERTISEMENT

ಚುನಾವಣೆ ಎದುರಿಸಲು ಮೋದಿಗಿಂತ ಮೊದಲು ಇಡಿ ಬಂದಿದೆ: ಕೆಸಿಆರ್‌ ಪುತ್ರಿ ವ್ಯಂಗ್ಯ

'ಜೈಲಿಗೆ ಹಾಕಿ, ಹೆದರುವುದಿಲ್ಲ' ಎಂದು ಕೇಂದ್ರ ಸರ್ಕಾರಕ್ಕೆ ಸವಾಲು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 12:47 IST
Last Updated 1 ಡಿಸೆಂಬರ್ 2022, 12:47 IST
   

ಹೈದರಾಬಾದ್‌: ‘ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ನನ್ನನ್ನು ಜೈಲಿಗೆ ಕಳುಹಿಸಿ. ಆದರೆ ನಾನು ಹೆದರುವುದಿಲ್ಲ’ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ (ಕೆಸಿಆರ್‌) ಅವರ ಪುತ್ರಿ ಕೆ. ಕವಿತಾ ಅವರು ಗುರುವಾರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಪ್ರಕರಣದ ಆರೋಪಿ ಅಮಿತ್‌ ಅರೋರಾ ಅವರ ರಿಮಾಂಡ್‌ ವರದಿಯಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ತಮ್ಮ ಹೆಸರು ಉಲ್ಲೇಖಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಇದು ಬಿಜೆಪಿಯ ರಾಜಕೀಯ ಪಿತೂರಿ’ ಎಂದು ಆರೋಪಿಸಿದ್ದಾರೆ.

‘ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಮೋದಿ ಅವರು ಬರುವುದಕ್ಕಿಂತಲೂ ಮೊದಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭೇಟಿ ನೀಡುವುದು ಸಾಮಾನ್ಯ. ನಿಮ್ಮ ಇ.ಡಿ, ಸಿಬಿಐ ತಂತ್ರಗಳು ತೆಲಂಗಾಣದಲ್ಲಿ ನಡೆಯುವುದಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯೆಯೂ ಆಗಿರುವ ಕವಿತಾ ಅವರು ಹೇಳಿದ್ದಾರೆ.

ADVERTISEMENT

ರಿಮಾಂಡ್‌ ವರದಿಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಸಂಸದ ಮಾಗುಂಟ ಶ್ರೀನಿವಾಸುಲು ಅವರ ಹೆಸರನ್ನೂ ಇ.ಡಿ ಉಲ್ಲೇಖಿಸಿದ್ದು, ಅದಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ, ‘ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ನನ್ನ ಕುಟುಂಬ ಭಾಗಿಯಾಗಿಲ್ಲ’ ಎಂದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ಅಮಿತ್‌ ಅರೋರಾ ಅವರನ್ನು ನವೆಂಬರ್‌ 29ರಂದು ಬಂಧಿಸಲಾಗಿತ್ತು. ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿ ವಿಚಾರಣೆ ನಡೆಸಲು ಅಮಿತ್‌ ಅವರನ್ನು 14 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ಇ.ಡಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.