ADVERTISEMENT

ಕವಿತಾಗೆ ಕೈತಪ್ಪಿದ ಲೋಕಸಭಾ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 16:23 IST
Last Updated 14 ಮಾರ್ಚ್ 2024, 16:23 IST
   

ಹೈದರಾಬಾದ್‌: ಬಿಆರ್‌ಎಸ್‌ ಮುಖ್ಯಸ್ಥ ಕೆ.ಚಂದ್ರ‌ಶೇಖರ್‌ ರಾವ್‌ ಅವರ ಪುತ್ರಿ, ವಿಧಾನಪರಿಷತ್‌ ಸದಸ್ಯೆ ಕೆ. ಕವಿತಾ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್‌ ಕೈತಪ್ಪಿದೆ.

ಕೆಸಿಆರ್‌ ಅವರು ಬುಧವಾರ ಸಂಜೆ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು  ಘೋಷಣೆ ಮಾಡಿದ್ದು, ನಿಜಾಮಾಬಾದ್‌ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಕವಿತಾ ಬದಲಿಗೆ ಶಾಸಕ ಬಾಜಿ ರೆಡ್ಡಿ ಅವರಿಗೆ ಟಿಕೆಟ್‌ ನೀಡಲಾಗಿದೆ.

2014ರಲ್ಲಿ ನಿಜಾಮಬಾದ್‌ನಿಂದ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಕವಿತಾ 2019ರಲ್ಲಿ ಅದೇ ಕ್ಷೇತ್ರದಲ್ಲಿ ಸೋಲುಂಡಿದ್ದರು. ಬಿಜೆಪಿಯು ನಿಜಾಮಾಬಾದ್‌ನ ಹಾಲಿ ಸಂಸದ ಧರ್ಮಪುರಿ ಅರವಿಂದ್‌ ಅವರನ್ನು ಮತ್ತೆ ಕಣಕ್ಕಿಳಿಸಿದೆ.

ADVERTISEMENT

ದೆಹಲಿ ಅಬಕಾರಿ ನೀತಿ ಹಗರಣದ ಸುಳಿಯಲ್ಲಿ ಕವಿತಾ ಸಿಲುಕಿದ್ದು, ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

‘ಕಳೆದ ವಿಧಾನಸಭೆಯಲ್ಲಿ ಪಕ್ಷದ ಸೋಲಿಗೆ ಕಾರಣವಾಗಿದ್ದ ಕುಟುಂಬ ರಾಜಕಾರಣದ ಆರೋಪದಿಂದ ಹೊರಬರಲು ಕೆಸಿಆರ್ ನಿರ್ಧರಿಸಿದ್ದು, ಈ ಹಿನ್ನೆಲೆಯಿಂದಾಗಿ ಪುತ್ರಿ ಕವಿತಾಗೆ ಟಿಕೆಟ್‌ ನೀಡಿಲ್ಲ. ಬಿಜೆಪಿಯ ಅರವಿಂದ್ ಅವರು ಪ್ರಬಲ ಸ್ಪರ್ಧೆಯನ್ನು ಒಡ್ಡಲಿದ್ದಾರೆ’ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.