ADVERTISEMENT

ಮಗನನ್ನು ಸಿಎಂ ಮಾಡುವುದು ಬಿಟ್ಟರೆ KCRಗೆ ಯಾವುದೇ ಗುರಿ ಇಲ್ಲ: ಅಮಿತ್ ಶಾ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2023, 4:47 IST
Last Updated 11 ಅಕ್ಟೋಬರ್ 2023, 4:47 IST
<div class="paragraphs"><p>ಅಮಿತ್ ಶಾ&nbsp;</p></div>

ಅಮಿತ್ ಶಾ 

   

ಹೈದರಾಬಾದ್: ತಮ್ಮ ಪುತ್ರಿ (ಕೆ.ಕವಿತಾ) ಜೈಲಿಗೆ ಹೋಗುವುದನ್ನು ತಡೆಯುವುದು ಮತ್ತು ಮಗನನ್ನು (ಕೆ.ಟಿ.ರಾಮರಾವ್) ಮುಖ್ಯಮಂತ್ರಿ ಮಾಡುವುದು ಬಿಟ್ಟರೆ ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ ಅವರಿಗೆ ಯಾವುದೇ ಗುರಿ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.

ತೆಲಂಗಾಣದ ಆದಿಲಾಬಾದ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ‘ವೃತ್ತಿಪರರು ಮತ್ತು ಬುದ್ಧಿಜೀವಿಗಳ ಸಮಾವೇಶ’ದಲ್ಲಿ ಮಾತನಾಡಿದ ಅವರು, ಬಿಜೆಪಿ ಸಿದ್ಧಾಂತದ ಆಧಾರದ ಮೇಲೆ ನಡೆಯುವ ಪಕ್ಷ ಎಂದು ಪ್ರತಿಪಾದಿಸಿದರು.

ADVERTISEMENT

ಕೆಸಿಆರ್‌ ನೇತೃತ್ವದ ‘ಭಾರತ ರಾಷ್ಟ್ರ ಸಮಿತಿ’ (ಬಿಆರ್‌ಎಸ್‌) ಪಕ್ಷಕ್ಕೆ ಯಾವುದಾದರೂ ತತ್ವ– ಸಿದ್ಧಾಂತವಿದ್ದರೆ ಹೇಳುವಂತೆ ನಾನು ಆಗ್ರಹಿಸುತ್ತೇನೆ. ಕವಿತಾ ಅವರನ್ನು ಜೈಲಿಗೆ ಹೋಗದಂತೆ ಉಳಿಸಿ, ಮಗ ಕೆ.ಟಿ.ರಾಮರಾವ್ ಅವರನ್ನು ಮುಖ್ಯಮಂತ್ರಿ ಮಾಡುವುದು ಬಿಟ್ಟರೆ ಅವರಿಗೆ ಯಾವುದೇ ಗುರಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಕೆಸಿಆರ್‌ ಪುತ್ರಿ ಕವಿತಾ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಶಾ ಕುಟುಕಿದ್ದಾರೆ.

ತೆಲಂಗಾಣದಲ್ಲಿ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕೆಸಿಆರ್‌ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಅವರು, ಕೆಸಿಆರ್‌ಗೆ ಜನರ ಬಳಿ ಮತ ಕೇಳುವ ಹಕ್ಕು ಇಲ್ಲ ಎಂದು ಗುಡುಗಿದ್ದಾರೆ.

ಮೋದಿಯವರು ಎರಡನೇ ಬಾರಿಗೆ ಪ್ರಧಾನಿಯಾದ ಬಳಿಕ ಜಮ್ಮು –ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ವಾಪಸ್ ಪಡೆದಿದ್ದಾರೆ. ಜತೆಗೆ, ಕಾಶ್ಮೀರವನ್ನು ಭಾರತದೊಂದಿಗೆ ಶಾಶ್ವತವಾಗಿ ಏಕೀಕರಿಸುವುದು ಪ್ರತಿಯೊಬ್ಬ ನಾಗರಿಕನ ಆಶಯವಾಗಿದ್ದು, ಅದರಂತೆ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ 1.80 ಕೋಟಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿರುವುದನ್ನು ಗಮನಿಸಿದರೆ, ಅಲ್ಲಿ ಭಯೋತ್ಪಾದನೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಐಎಂಐಎಂ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ರಾವ್ ಅವರೊಂದಿಗೆ ಬಿಜೆಪಿ ಹೋಗುವುದಿಲ್ಲ ಎಂದು ಪುನರುಚ್ಚರಿಸಿದ ಶಾ, ಕೇಸರಿ ಪಕ್ಷ ಬಿಜೆಪಿಯು ಭ್ರಷ್ಟಾಚಾರಿಗಳ ಜತೆ ಕೈಜೋಡಿಸುವುದಿಲ್ಲ ಎಂದು ಹೇಳಿದರು.

2024ರ ಲೋಕಸಭೆ ಚುನಾವಣೆಯಲ್ಲಿ ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲದ ಕೊರತೆ ಉಂಟಾದರೆ ಪ್ರಾದೇಶಿಕ ಪಕ್ಷ ಬೆಂಬಲ ನೀಡಬಹುದು ಎಂಬುದು ಕಾಂಗ್ರೆಸ್‌ನ ನಂಬಿಕೆಯಾಗಿದೆ. ಹಾಗಾಗಿ ಕಾಂಗ್ರೆಸ್‌ನವರಿಗೆ ತೆಲಂಗಾಣದಲ್ಲಿ ಬಿಆರ್‌ಎಸ್ ಪಕ್ಷವನ್ನು ಸೋಲಿಸುವುದು ಇಷ್ಟವಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರಿಂದ ಎರಡೂ ಪಕ್ಷಗಳಿಗೆ ನಿರಾಶೆಯಾಗಲಿದೆ ಎಂದು ಶಾ ಭವಿಷ್ಯ ನುಡಿದಿದ್ದಾರೆ.

ಎನ್‌ಡಿಎ ಸಾಧನೆಗಳನ್ನು ಉಲ್ಲೇಖಿಸಿದ ಅವರು, ಮೋದಿ ನಾಯಕತ್ವದಲ್ಲಿ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿ ಸಾಧಿಸುತ್ತಿದೆ. ಮುಂದಿನ 25 ವರ್ಷಗಳಲ್ಲಿ ಭಾರತವು ಶಕ್ತಿಯುತ ಆರ್ಥಿಕತೆ ಹೊಂದಿದ ರಾಷ್ಟ್ರವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.