ಹೈದರಾಬಾದ್: ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸೊಂಟದ ಮೂಳೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಜನರು ಕೆಲ ದಿನಗಳ ಕಾಲ ತಮ್ಮನ್ನು ಭೇಟಿ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ವಿಡಿಯೊ ಸಂದೇಶವನ್ನು ಹಂಚಿಕೊಂಡಿರುವ ಬಿಆರ್‌ಎಸ್ ಪಕ್ಷದ ನಾಯಕ ಕೆಸಿಆರ್, ‘ಆಸ್ಪತ್ರೆಗೆ ಹೆಚ್ಚಿನ ಜನರು ಭೇಟಿ ನೀಡುವುದರಿಂದ ಸೋಂಕು ಪ್ರಮಾಣ ಹೆಚ್ಚಾಗಲಿದೆ. ಜತೆಗೆ ಆಸ್ಪತ್ರೆಗೆ ದಾಖಲಾಗಿರುವ ಇತರ ರೋಗಿಗಳಿಗೂ ತೊಂದರೆಯಾಗಲಿದೆ’ ಎಂದಿದ್ದಾರೆ.
‘ಮುಂದಿನ ಹತ್ತು ದಿನಗಳ ಕಾಲ ಯಾರೂ ನನ್ನನ್ನು ಭೇಟಿಯಾಗುವುದು ಬೇಡ. ಎಲ್ಲರೂ ಅವರವರ ಕೆಲಸಕ್ಕೆ ಮರಳಿ. ಆಸ್ಪತ್ರೆಯಲ್ಲಿ ದಾಖಲಾಗಿರುವ ಇತರ ರೋಗಿಗಳ ಆರೋಗ್ಯವೂ ಮುಖ್ಯ. ಅವರ ಸುರಕ್ಷತೆಯೂ ನಮ್ಮೆಲ್ಲರ ಆದ್ಯತೆಯಾಗಿರಬೇಕು. ಗುಣಮುಖನಾದ ನಂತರ ಜನರನ್ನು ಭೇಟಿ ಮಾಡುತ್ತೇನೆ’ ಎಂದಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಅವರ ಸಂಪುಟದ ಸಚಿವರು, ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು, ನಟರಾದ ಚಿರಂಜೀವಿ ಹಾಗೂ ಪ್ರಕಾಶ್ ರಾಜ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಕೆಸಿಆರ್ ಆರೋಗ್ಯ ವಿಚಾರಿಸಿದರು.
ಮನೆಯಲ್ಲಿ ಕುಸಿದಿದ್ದ ಕೆಸಿಆರ್ ಅವರ ಸೊಂಟದ ಮೂಳೆ ಮುರಿದಿತ್ತು. ಡಿ. 8ರಂದು ಅವರಿಗೆ ಶಸ್ತ್ರಚಿಕಿತ್ಸೆ ನಡೆದಿತ್ತು. ಅವರಿಗೆ 6ರಿಂದ 8 ವಾರಗಳ ವಿಶ್ರಾಂತಿ ಅಗತ್ಯ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.