ADVERTISEMENT

ತಪ್ಪು ಸಂದೇಶ ನೀಡುವ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು– ಗೋವಾ ಸರ್ಕಾರ

ಪಿಟಿಐ
Published 2 ಆಗಸ್ಟ್ 2023, 11:13 IST
Last Updated 2 ಆಗಸ್ಟ್ 2023, 11:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಪಣಜಿ: ಕರಾವಳಿ ರಾಜ್ಯವನ್ನು ದೂಷಿಸುವ ಸಾಮಾಜಿಕ ಜಾಲತಾಣಗಳ ಖಾತೆ ಮೇಲೆ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ(ಐಟಿ) ತೀವ್ರ ನಿಗಾ ವಹಿಸಲಿದೆ ಎಂದು ಗೋವಾ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರೋಹನ್‌ ಖೌಂಟೆ ಬುಧವಾರ ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹೆಸರಿಗೆ ಧಕ್ಕೆ ತರುವಂತಹ ಸಾಮಾಜಿಕ ಜಾಲತಾಣಗಳ ಖಾತೆ ಮೇಲೆ ನಿಗಾ ವಹಿಸಲು ಈಗಾಗಲೇ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಸೈಬರ್‌ ಕ್ರೈಂ ಸೆಲ್‌ಗೆ ಆದೇಶಿಸಿದ್ದಾರೆಂದು ಖೌಂಟೆ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಕೆಲವರು, ಗೋವಾ ಪ್ರವಾಸಕ್ಕೆ ಬಂದು, ಇಲ್ಲಿನ ಅನೇಕ ಸ್ಥಳಗಳ ಕುರಿತು ವಿಡಿಯೊ (ಮೈಕ್ರೋಬ್ಲಾಗಿಂಗ್‌) ಮಾಡುತ್ತಾ, ತಪ್ಪು ಮಾಹಿತಿಗಳನ್ನು ಈ ವೇದಿಕೆಗಳ ಮೂಲಕ ಹರಡುತ್ತಿದ್ದಾರೆ. ಆ ಮೂಲಕ ಅಗ್ಗದ ಜನಪ್ರಿಯತೆ ಪಡೆಯಲು ನೋಡುತ್ತಿದ್ದಾರೆ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಭಾವಿ ಖಾತೆಗಳ ಮೇಲೆ ಪ್ರವಾಸೋದ್ಯಮ ಮತ್ತು ಐಟಿ ಇಲಾಖೆ ನಿಗಾ ವಹಿಸಿದೆ ಎಂದರು.

ADVERTISEMENT

ಮಂಗಳವಾರ ಗೋವಾ ವಿಧಾನಸಭೆ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸಿದ ವಾಸ್ಕೋ ಶಾಸಕ ದಾಜಿ ಸಲ್ಕರ್, ‘ರಾಜ್ಯದ ಹೆಸರು ಹಾಗೂ ಇಲ್ಲಿನ ಧಾರ್ಮಿಕ ವಿಚಾರಗಳಿಗೆ ಧಕ್ಕೆ ತರುವಂತಹ ವಿಷಯಗಳನ್ನು ಇನ್‌ಸ್ಟಾಗ್ರಾಮ್‌ ಖಾತೆದಾರರು ತಮ್ಮ ಪೋಸ್ಟ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.