ನವದೆಹಲಿ: ತಾನು ಜೈಲಿನಲ್ಲಿ ಸೇವಿಸಿದ ಆಹಾರದ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ) ಕ್ಷುಲ್ಲಕವಾಗಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ವೈದ್ಯರು ಸಿದ್ಧಪಡಿಸಿದ ಆಹಾರಕ್ರಮದ ಪಟ್ಟಿಗೆ ಅನುಗುಣವಾಗಿಯೇ ಆಹಾರ ಸೇವಿಸಿದ್ದಾಗಿ ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
‘ಕೇಜ್ರಿವಾಲ್ ಅವರು ಟೈಪ್–2 ಮಧುಮೇಹಿ ಆಗಿದ್ದರೂ ನಿತ್ಯ ಮಾವಿನಹಣ್ಣು ಮತ್ತು ಸಿಹಿತಿಂಡಿಗಳಂತಹ ಸಕ್ಕರೆ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸುತ್ತಿದ್ದಾರೆ. ಈ ಮೂಲಕ ಅವರು ವೈದ್ಯಕೀಯ ಜಾಮೀನಿಗೆ ಆಧಾರಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ’ ಎಂದು ಇ.ಡಿ ಗುರುವಾರ ನ್ಯಾಯಾಲಯಕ್ಕೆ ತಿಳಿಸಿತ್ತು.
ಕೇಜ್ರಿವಾಲ್ ಅವರಿಗೆ ನೀಡುತ್ತಿರುವ ಆಹಾರಕ್ರಮದ ಬಗ್ಗೆ ಇ.ಡಿ ಮಾಡಿರುವ ಆರೋಪ ಕ್ಷುಲ್ಲಕವಾಗಿದ್ದು, ಹಾಸ್ಯಾಸ್ಪದವಾಗಿದೆ. ಅದರ ಹೇಳಿಕೆಯು ಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತವಾಗಿದೆ ಎಂದೂ ವಕೀಲರ ಮೂಲಕ ಕೇಜ್ರಿವಾಲ್ ನ್ಯಾಯಾಲಯಕ್ಕೆ ಹೇಳಿದರು.
ಇ.ಡಿ ಆರೋಪಿಸಿದ್ದು...
* ಕೇಜ್ರಿವಾಲ್ ಅವರು ಜಾಮೀನು ಪಡೆಯಲು ತನ್ನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಿದ್ದಾರೆ. ವೈದ್ಯಕೀಯ ಕಾರಣಗಳನ್ನು ನೀಡಿ ಜಾಮೀನು ಪಡೆಯುವ ಉದ್ದೇಶ ಅವರದ್ದು.
* ನಿಯಮಿತವಾಗಿ ಮಾವಿನಹಣ್ಣು, ಸಿಹಿ ತಿಂಡಿಗಳು, ಆಲೂಪೂರಿ ಇತ್ಯಾದಿಗಳನ್ನು ಕೇಜ್ರಿವಾಲ್ ತಿನ್ನುತ್ತಿದ್ದಾರೆ
ಕೇಜ್ರಿವಾಲ್ ವಕೀಲ ಅಭಿಷೇಕ್ ಸಿಂಘ್ವಿ ಹೇಳಿದ್ದು...
* ಜಾಮೀನು ಪಡೆಯಲು ಸಕ್ಕರೆ ಅಂಶ ಹೆಚ್ಚಿರುವ ಪದಾರ್ಥಗಳನ್ನು ಸೇವಿಸಿದರೆ ಪಾರ್ಶ್ವವಾಯುವಿನಂತಹ ಅಪಾಯ ಎದುರಾಗುವುದಿಲ್ಲವೇ? ಬಂಧನಕ್ಕೂ ಮುನ್ನ ವೈದ್ಯರು ಸಿದ್ಧಪಡಿಸಿಕೊಟ್ಟ ಆಹಾರಕ್ರಮದ ಪಟ್ಟಿಗೆ ಅನುಗುಣವಾಗಿಯೇ ಅವರು ಆಹಾರ ಸೇವಿಸುತ್ತಿದ್ದಾರೆ.
* ಇವುಗಳನ್ನು ಅವರಿಗೆ ಕೆಲವು ಬಾರಿ ಮಾತ್ರ ನೀಡಲಾಗಿದೆ. ಮನೆಯಿಂದ ಕಳುಹಿಸಿದ 48 ತಿನಿಸುಗಳ ಪೈಕಿ ಮೂರು ಬಾರಿ ಮಾತ್ರ ಮಾವಿನ ಹಣ್ಣು ಕಳುಹಿಸಲಾಗಿದೆ. ಅವರಿಗೆ ಏಪ್ರಿಲ್ 8ರ ನಂತರ ಮಾವಿನ ಹಣ್ಣು ಕಳುಹಿಸಿಲ್ಲ. ಅದಾಗ್ಯೂ, ಮಾವಿನ ಹಣ್ಣಿನಲ್ಲಿ ವೈಟ್ ರೈಸ್ ಅಥವಾ ಬ್ರೌನ್ ರೈಸ್‌ಗಿಂತ ಸಕ್ಕರೆ ಮಟ್ಟ ಕಡಿಮೆ ಇದೆ. ಚಹಾದಲ್ಲಿ ಶುಗರ್ ಫ್ರೀ (ಕೃತಕ ಸಕ್ಕರೆ) ಬಳಸುತ್ತಾರೆ. ಆಲೂಪೂರಿಯನ್ನು ಒಮ್ಮೆ ಮಾತ್ರ ಪೂಜಾ ಸಮಯದಲ್ಲಿ ನೀಡಲಾಗಿತ್ತು.
‘ವೈದ್ಯರ ಸಮಾಲೋಚನೆಗೆ ಅವಕಾಶ ಕೊಡಿ’
ತಮ್ಮ ಸಕ್ಕರೆ ಮಟ್ಟದ ಏರಿಳಿತದ ಬಗ್ಗೆ ವಾರಕ್ಕೆ ಮೂರು ಬಾರಿ ವೈದ್ಯರನ್ನು ಸಂಪರ್ಕಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಹಿಂಪಡೆದ ಕೇಜ್ರಿವಾಲ್ ಅವರು ನಿತ್ಯ 15 ನಿಮಿಷ ತಮ್ಮ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ಅವಕಾಶ ಒದಗಿಸಬೇಕು ಎಂದು ಕೋರಿ ಶುಕ್ರವಾರ ಹೊಸ ಅರ್ಜಿ ಸಲ್ಲಿಸಿದರು. ‘ಜೈಲಿನಲ್ಲಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ಘನತೆಯ ಜೀವನ ನಡೆಸುವ ಮತ್ತು ಉತ್ತಮ ಆರೋಗ್ಯ ಕಾಯ್ದುಕೊಳ್ಳುವ ಹಕ್ಕಿಲ್ಲವೇ? ಅವರೇನು ದರೋಡೆಕೋರರೇ? ತಮ್ಮ ವೈದ್ಯರೊಂದಿಗೆ 15 ನಿಮಿಷ ವಿಡಿಯೊ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಲು ಅವಕಾಶ ನೀಡಬಹುದಲ್ಲ’ ಎಂದು ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಸಿಂಘ್ವಿ ಕೋರಿದರು. ಸಿಂಘ್ವಿ ಅವರ ಕೋರಿಕೆಗೆ ಇ.ಡಿ ವಿರೋಧ ವ್ಯಕ್ತಪಡಿಸಿತು. ಕೇಜ್ರಿವಾಲ್ ಅವರು ಸೇವಿಸುತ್ತಿರುವ ಆಹಾರವು ಅವರ ವೈದ್ಯರು ಸೂಚಿಸಿದ ಆಹಾರಕ್ರಮದ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಪ್ರತಿಪಾದಿಸಿತು. ಅಲ್ಲದೆ ಕೇಜ್ರಿವಾಲ್ ಅವರ ಮಧುಮೇಹವನ್ನು ಗಮನಿಸಲು ತಿಹಾರ್ ಜೈಲಿನಲ್ಲಿ ಸಾಕಷ್ಟು ವೈದ್ಯಕೀಯ ಸೌಲಭ್ಯಗಳಿವೆ ಎಂದು ಹೇಳಿತು. ಕೇಜ್ರಿವಾಲ್ ಪರ ಹಾಜರಿದ್ದ ಮತ್ತೊಬ್ಬ ಹಿರಿಯ ವಕೀಲ ರಮೇಶ್ ಗುಪ್ತಾ ಅವರು ಇ.ಡಿ ವಾದವನ್ನು ವಿರೋಧಿಸಿದರು. ಈ ವಿಚಾರಣೆಗೂ ಇ.ಡಿಗೂ ಏನು ಸಂಬಂಧ? ಇದರಲ್ಲಿ ಇ.ಡಿ ಕಕ್ಷಿದಾರರೇ ಅಲ್ಲ. ಇದು ಕೇಜ್ರಿವಾಲ್ ಮತ್ತು ಜೈಲು ಹಾಗೂ ನ್ಯಾಯಾಲಯದ ನಡುವಿನ ವಿಚಾರ. ಇ.ಡಿಯವರು ಮಾಧ್ಯಮ ವಿಚಾರಣೆ ನಡೆಸುತ್ತಿದ್ದಾರೆ ಮತ್ತು ಅವುಗಳು ತಮಗೆ ಬೇಕಾದುದನ್ನು ಪ್ರಕಟಿಸುತ್ತಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ತಮ್ಮ ವೈದ್ಯರೊಂದಿಗೆ ನಿತ್ಯ ಸಮಾಲೋಚನೆಗೆ ಅವಕಾಶ ಕೋರಿ ದೆಹಲಿ ಸಿ.ಎಂ ಸಲ್ಲಿಸಿದ ಅರ್ಜಿಯ ಆದೇಶವನ್ನು ನ್ಯಾಯಾಲಯವು ಸೋಮವಾರಕ್ಕೆ ಕಾಯ್ದಿರಿಸಿತು. ಈ ಸಂಬಂಧ ತಿಹಾರ್ ಜೈಲಿನ ಅಧಿಕಾರಿಗಳು ಶನಿವಾರದೊಳಗೆ ಉತ್ತರ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.