ನವದೆಹಲಿ (ಪಿಟಿಐ): ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅಬಕಾರಿ ನೀತಿ ಹಗರಣದ ಸಂಬಂಧ ವಿಚಾರಣೆ ಎದುರಿಸಲು ಭಾನುವಾರ ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ಹಾಜರಾದರು.
ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಿಬಿಐ ಕೇಂದ್ರ ಕಚೇರಿ ತಲುಪಿದ ಕೇಜ್ರಿವಾಲ್ ಅವರನ್ನು ಅಧಿಕಾರಿಗಳು ಮೊದಲ ಮಹಡಿಯಲ್ಲಿರುವ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಕರೆದೊಯ್ದರು. ಬಳಿಕ ಸುಮಾರು ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಮಧ್ಯಾಹ್ನ ಊಟದ ವಿರಾಮ ನೀಡಿದ್ದರೂ ಕೂಡ ಕೇಜ್ರಿವಾಲ್ ಅವರು ಕಚೇರಿಯಿಂದ ಹೊರ ಬರಲಿಲ್ಲ.
ಸಿಬಿಐ ವಿಚಾರಣೆಗೆ ಹಾಜರಾಗುವ ಮುನ್ನ ರಾಜ್‌ಘಾಟ್‌ಗೆ ಭೇಟಿ ನೀಡಿದ್ದ ಕೇಜ್ರಿವಾಲ್ ಅವರು ಮಹಾತ್ಮ ಗಾಂಧೀಜಿ ಅವರ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಈ ವೇಳೆ ಅವರೊಂದಿಗೆ ಸಚಿವ ಸಂಪುಟದ ಕೆಲ ಸಹೋದ್ಯೋಗಿಗಳು ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇದ್ದರು. ಬಳಿಕ ಎಲ್ಲರೂ ಸಿಬಿಐ ಕಚೇರಿಯತ್ತ ಪ್ರಯಾಣ ಬೆಳೆಸಿದರು.
ಇದಕ್ಕೂ ಮುನ್ನ ಟ್ವಿಟರ್‌ನಲ್ಲಿ ಐದು ನಿಮಿಷಗಳ ವಿಡಿಯೊ ಸಂದೇಶವೊಂದನ್ನು ಪ್ರಕಟಿಸಿದ್ದ ಕೇಜ್ರಿವಾಲ್, ‘ಬಿಜೆಪಿಯವರು ನನ್ನನ್ನು ಬಂಧಿಸುವಂತೆ ಸಿಬಿಐಗೆ ನಿರ್ದೇಶನ ನೀಡಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದರು.
‘ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಅವರ ಎಲ್ಲಾ ಪ್ರಶ್ನೆಗಳಿಗೂ ಪ್ರಾಮಾಣಿಕವಾಗಿ ಉತ್ತರಿಸುತ್ತೇನೆ. ಇವರು (ಬಿಜೆಪಿ) ತುಂಬಾ ಪ್ರಭಾವಿಗಳು. ಎಂತಹವರನ್ನಾದರೂ ಜೈಲಿಗೆ ಕಳುಹಿಸಬಲ್ಲರು. ವ್ಯಕ್ತಿಯು ಅಪರಾಧ ಮಾಡಿರಲಿ ಅಥವಾ ಮಾಡದಿರಲಿ, ಅದ್ಯಾವುದೂ ಗಣನೆಗೆ ಬರುವುದಿಲ್ಲ’ ಎಂದು ಆರೋಪಿಸಿದ್ದರು.
‘ನನ್ನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರೆಲ್ಲರೂ ಒತ್ತಡ ಹೇರುತ್ತಿದ್ದಾರೆ. ಇದಕ್ಕಾಗಿ ಶನಿವಾರದಿಂದಲೇ ಆಗ್ರಹಿಸುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಸಿಬಿಐಗೆ ಸೂಚನೆಯನ್ನೂ ಕೊಟ್ಟಿದ್ದಾರೆ. ಬಿಜೆಪಿಯವರೇ ಆದೇಶ ಹೊರಡಿಸಿದ ಮೇಲೆ ಮುಗಿಯಿತು. ಸಿಬಿಐನವರು ನನ್ನನ್ನು ಬಂಧಿಸಲು ಮುಂದಾಗುವರು’ ಎಂದು ಹೇಳಿದ್ದರು.
‘ಅಧಿಕಾರಿಗಳು ಯಾವ ಪ್ರಶ್ನೆಯನ್ನಾದರೂ ಕೇಳಲಿ. ಸತ್ಯವನ್ನೇ ನುಡಿಯುತ್ತೇನೆ. ಏನನ್ನೂ ಮುಚ್ಚಿಡುವುದಿಲ್ಲ’ ಎಂದಿದ್ದರು.
ಪ್ರತಿಭಟನೆ: ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಕರೆದಿರುವ ಸಿಬಿಐ ಕ್ರಮವನ್ನು ಖಂಡಿಸಿರುವ ಎಎಪಿ ನಾಯಕರು ಹಾಗೂ ಕಾರ್ಯಕರ್ತರು ದೇಶದ ವಿವಿಧೆಡೆ ಪ್ರತಿಭಟನೆ ನಡೆಸಿದ್ದು, ಪೊಲೀಸರು ಸಾವಿರಾರು ಮಂದಿಯನ್ನು ಬಂಧಿಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಮಾನ್, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ದೆಹಲಿ ಸರ್ಕಾರದ ಸಚಿವರು ಹಾಗೂ ಮುಖಂಡರು ಸಿಬಿಐ ಕಚೇರಿ ಹೊರಭಾಗದಲ್ಲಿನ ಪಾದಚಾರಿ ಮಾರ್ಗದ ಮೇಲೆ ಕುಳಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದ್ದಾರೆ.
***
ನಾನು ಈ ದೇಶಕ್ಕಾಗಿ ಬದುಕುತ್ತಿದ್ದೇನೆ. ದೇಶಕ್ಕಾಗಿ ಸಾಯಲೂ ಸಿದ್ಧನಿದ್ದೇನೆ. ಸಿಬಿಐ ಮತ್ತು ಇ.ಡಿ 100 ಬಾರಿ ಕರೆದರೂ ವಿಚಾರಣೆಗೆ ಹಾಜರಾಗುತ್ತೇನೆ–ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ
***
ಎಎಪಿಯು ಅಧಿಕಾರಕ್ಕೇರಲು ಅಣ್ಣಾ ಹಜಾರೆಯವರನ್ನು ಬಳಸಿಕೊಂಡಿತು. ಭ್ರಷ್ಟಾಚಾರದ ವಿಚಾರ ಪ್ರಸ್ತಾಪಿಸಿ ಹಜಾರೆಯವರನ್ನು ಮೂರ್ಖರನ್ನಾಗಿಸಿತು–ಕಿರಣ್ ರಿಜಿಜು, ಕೇಂದ್ರ ಕಾನೂನು ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.