ADVERTISEMENT

ಪಂಜಾಬ್‌ | ಕೆಲಸ ಮಾಡದಿದ್ದರೆ ತಲೆದಂಡ: ಎಎಪಿ ಶಾಸಕರಿಗೆ ಕೇಜ್ರಿವಾಲ್ ಎಚ್ಚರಿಕೆ

ಪಿಟಿಐ
Published 20 ಮಾರ್ಚ್ 2022, 18:44 IST
Last Updated 20 ಮಾರ್ಚ್ 2022, 18:44 IST
ಕೇಜ್ರಿವಾಲ್ ಅವರ ಜೊತೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿದ್ದ ಪಂಜಾಬ್‌ನ ಎಎಪಿ ಶಾಸಕರು–ಪಿಟಿಐ ಚಿತ್ರ
ಕೇಜ್ರಿವಾಲ್ ಅವರ ಜೊತೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿದ್ದ ಪಂಜಾಬ್‌ನ ಎಎಪಿ ಶಾಸಕರು–ಪಿಟಿಐ ಚಿತ್ರ   

ಚಂಡೀಗಡ: ‘ಉತ್ತಮವಾಗಿ ಕೆಲಸ ಮಾಡಿ, ಇಲ್ಲದಿದ್ದರೆ ತಲೆದಂಡಕ್ಕೆ ಸಿದ್ಧರಾಗಿ’ – ಪಂಜಾಬ್ ಸರ್ಕಾರದ ನೂತನ ಸಚಿವರಿಗೆ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಹೇಳಿದ ಮಾತಿದು.

ಪಂಜಾಬ್ ವಿಧಾನಸಭೆಗೆ ಪಕ್ಷದಿಂದ ಆಯ್ಕೆಯಾಗಿರುವ ನೂತನ ಶಾಸಕರ ಜತೆ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕಭಾನುವಾರ ಮಾತನಾಡಿದರು.ರಾಜ್ಯದ ಜನರ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡುವಂತೆ ಶಾಸಕರಿಗೆ ಕರೆ ಕೊಟ್ಟರು.

‘ಮುಖ್ಯಮಂತ್ರಿ ಭಗವಂತ ಮಾನ್ ಅವರು ಎಲ್ಲ ಸಚಿವರಿಗೂ ಅವರು ಮಾಡಬೇಕಾದ ಕೆಲಸಗಳ ಬಗ್ಗೆ ಗುರಿ ನಿಗದಿಪಡಿಸಲಿದ್ದಾರೆ. ದಿನದ ಇಪ್ಪತ್ನಾಲ್ಕು ಗಂಟೆಯೂ ಸಚಿವರು ಕೆಲಸ ಮಾಡಬೇಕು. ನಿಗದಿಪಡಿಸಿರುವ ಗುರಿಯನ್ನು ಮುಟ್ಟಲುಸಚಿವರು ವಿಫಲವಾದರೆ, ಸಚಿವರನ್ನು ಬದಲಿಸಿ ಎಂದು ಜನರು ಹೇಳಲು ಶುರು ಮಾಡುತ್ತಾರೆ. ಹೀಗಾಗಿ ಮಾನ್ ಅವರು ಕೊಟ್ಟಿರುವ ಕೆಲಸವನ್ನು ಮಾಡಿ ಮುಗಿಸಲೇಬೇಕು’ ಎಂದು ಕೇಜ್ರಿವಾಲ್ ಹೇಳಿದರು.

ADVERTISEMENT

ಯಾರ ಬಗ್ಗೆಯೂ ಆಕ್ಷೇಪಾರ್ಹ ಭಾಷೆ ಬಳಸದಂತೆ, ಒರಟಾಗಿ ನಡೆದುಕೊಳ್ಳದಂತೆ ಅವರು ಶಾಸಕರಿಗೆ ಸಲಹೆ ನೀಡಿದ್ದಾರೆ. ತಮ್ಮ ಕೆಲಸಗಳ ಮೂಲಕ ಜನರ ಹೃದಯವನ್ನು ಗೆಲ್ಲುವಂತೆ ಕರೆ ನೀಡಿದ ಅವರು, ಶಾಸಕರು ತಪ್ಪು ಮಾಡಿದ್ದಾರೆ ಎಂಬುದು ಕಂಡುಬಂದರೆ ‘ಕಠಿಣ ಕ್ರಮ’ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದರು.

‘ನಾನು ಏನನ್ನಾದರೂ ಸಹಿಸಿಕೊಳ್ಳಬಲ್ಲೆ. ಆದರೆ ಅವಿಧೇಯತೆ ಹಾಗೂ ಸಾರ್ವಜನಿಕರ ಹಣಕ್ಕೆ ಕನ್ನ ಹಾಕುವುದನ್ನು ಸಹಿಸಿಕೊಳ್ಳುವುದಿಲ್ಲ. ಯಾರಾದರೂ ತಪ್ಪು ಮಾಡಿರುವುದು ನನ್ನ ಅಥವಾ ಮಾನ್ ಅವರ ಗಮನಕ್ಕೆ ಬಂದರೆ, ಒಂದು ಅವಕಾಶವನ್ನೂ ನೀಡುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.

‘ಚುನಾವಣೆಯಲ್ಲಿ ಇತರ ಪಕ್ಷಗಳ ದೊಡ್ಡ ವ್ಯಕ್ತಿಗಳು ಸೋತಿದ್ದಾರೆ. ಅವರನ್ನು ಸೋಲಿಸಿದ್ದು ನೀವಲ್ಲ. ಜನ ಅವರನ್ನು ಸೋಲಿಸಿದ್ದಾರೆ. ಅಣ್ಣನ ಸ್ಥಾನದಲ್ಲಿ ನಿಂತು ನಿಮಗೆ ಮಾರ್ಗದರ್ಶನ ನೀಡುತ್ತೇನೆ. ಅಧಿಕಾರಿಗಳ ವರ್ಗಾವಣೆ ಮಾಡಿಸಲು ಸಚಿವರ ಅಥವಾ ಮುಖ್ಯಮಂತ್ರಿಯ ಕಚೇರಿಗೆ ಹೋಗಬೇಡಿ’ ಎಂದು ಕೇಜ್ರಿವಾಲ್ ಹೇಳಿದರು.

25 ಸಾವಿರ ಸರ್ಕಾರಿ ನೌಕರರ ನೇಮಕ ಹಾಗೂ ಮಾಜಿ ಜನಪ್ರತಿನಿಧಿಗಳಿಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್ ಪಡೆಯುವ ಮಾನ್ ಅವರ ನಿರ್ಧಾರಗಳನ್ನು ಕೇಜ್ರಿವಾಲ್ ಪ್ರಶಂಸಿಸಿದರು.ಕಳೆದ ಮೂರು ದಿನಗಳಲ್ಲಿ ಮಾನ್ ಅವರು ದೃಢ ನಿರ್ಧಾರಗಳನ್ನು ತೆಗೆದುಕೊಂಡು ಗಮನ ಸೆಳೆದಿದ್ದಾರೆ. ಅವರ ಬಗ್ಗೆ ಹೆಮ್ಮೆ ಎನಿಸುತ್ತಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಎಎಪಿ ಸರ್ಕಾರ ರಚನೆಯಾದ ಬಳಿಕ ಶಾಸಕರ ಜೊತೆ ಮೊದಲ ಬಾರಿಗೆ ಮಾತುಕತೆ ನಡೆಸಿದ ಅವರು, ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುವಂತೆ ಕರೆ ನೀಡಿದರು. ‘ಜನರು ಪಕ್ಷದ ಮೇಲೆ ನಂಬಿಕೆ ಇರಿಸಿದ್ದು, ಅವರ ಆಶೋತ್ತರಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿ’ ಎಂದರು.‘ನಾವು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು’ ಎಂದು ಪ್ರಚಾರದ ವೇಳೆ ಕರೆ ನೀಡಿದ್ದನ್ನು ಕೇಜ್ರಿವಾಲ್ ನೆನಪಿಸಿದರು.

‘ವೈಯಕ್ತಿಕ ಅಭಿಲಾಷೆಗಳನ್ನು ಬದಿಗಿರಿಸಿ, ಒಂದು ತಂಡವಾಗಿ ನಾವು ಕೆಲಸ ಮಾಡಿದರೆ, ರಾಜ್ಯ ಅಭಿವೃದ್ಧಿಯಾಗಲಿದೆ. ಮಾನ್ ಅವರು ಈ ತಂಡದ ನಾಯಕರಾಗಿದ್ದಾರೆ’ ಎಂದು ಅವರು ಹೇಳಿದರು.ಮಾನ್ ಅವರು ಘೋಷಿಸಿರುವ ಭ್ರಷ್ಟಾಚಾರ ತಡೆ ಸಹಾಯವಾಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.

*
ರಾಜಸ್ಥಾನದ ಮೇಲೆ ಎಎಪಿ ಕಣ್ಣು
ಜೈಪುರ:
ಮುಂದಿನ ವರ್ಷ ನಡೆಯಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆ ಮೇಲೆ ಗಮನ ಹರಿಸಿರುವ ಆಮ್ ಆದ್ಮಿ ಪಕ್ಷ, ಇದೇ 26, 27ರಂದು ಎರಡು ದಿನಗಳ ಸಮಾವೇಶ ಹಮ್ಮಿಕೊಂಡಿದೆ. ರಾಜಸ್ಥಾನದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವುದು ಇದರ ಉದ್ದೇಶ.

ಪಕ್ಷದ ರಾಜಸ್ಥಾನ ಘಟಕದ ಉಸ್ತುವಾರಿ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ಎರಡು ದಿನಗಳ ಸಮಾವೇಶದಲ್ಲಿ, ಪಕ್ಷದ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಮಾರ್ಗಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ‘ವಿಜಯ‌ ಉತ್ಸವ’ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದೆ.

*
ನಾನೀಗ ಶಾಸಕನಾಗಿದ್ದೇನೆ. ಮುಂದಿನ ದಿನಗಳಲ್ಲಿ ಸಚಿವನಾಗುತ್ತೇನೆ, ಮುಖ್ಯಮಂತ್ರಿಯಾಗುತ್ತೇನೆ ಎಂದುಕೊಳ್ಳಬೇಡಿ. ಇಂತಹ ಆಲೋಚನೆಗಳು ನಿಮ್ಮ ಮನಸ್ಸಲ್ಲಿ ಬರಬಾರದು.
-ಅರವಿಂದ ಕೇಜ್ರಿವಾಲ್, ಎಎಪಿ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.