ADVERTISEMENT

ಬಿಜೆಪಿ ಸೇರಿದರೆ ಇ.ಡಿಯಿಂದ ನೋಟಿಸ್‌ ಕಿರುಕುಳ ತಪ್ಪುತ್ತದೆ: ಕೇಜ್ರಿವಾಲ್‌

ಪಿಟಿಐ
Published 7 ಮಾರ್ಚ್ 2024, 2:24 IST
Last Updated 7 ಮಾರ್ಚ್ 2024, 2:24 IST
ಅರವಿಂದ್‌ ಕೇಜ್ರಿವಾಲ್‌
ಅರವಿಂದ್‌ ಕೇಜ್ರಿವಾಲ್‌   

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇದುವರೆಗೆ ಎಂಟು ಬಾರಿ ಜಾರಿ ನಿರ್ದೇಶನಾಲಯದ(ಇ.ಡಿ) ಸಮನ್ಸ್‌ಗಳನ್ನು ತಪ್ಪಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಜೆಪಿಗೆ ಸೇರಿದರೆ ಇದೆಲ್ಲದಕ್ಕೂ ಮುಕ್ತಿ ಸಿಗುತ್ತದೆ ಎಂದಿದ್ದಾರೆ.

ಟಿಎಂಸಿ ನಾಯಕ ತಪಸ್‌ ರಾಯ್‌ ಬಿಜೆಪಿ ಸೇರ್ಪಡೆ ಕುರಿತ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್‌, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಇ.ಡಿ ಬಳಸಿ ಕಿರುಕುಳ ನೀಡುವ ಮೂಲಕ ವಿರೋಧ ಪಕ್ಷದ ನಾಯಕರನ್ನು ಬಿಜೆಪಿಗೆ ಸೇರಲು ಬಲವಂತ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

‘ನೀವು ಎಲ್ಲಿಗೆ ಹೋಗುತ್ತೀರಿ - ಬಿಜೆಪಿಗೆ ಅಥವಾ ಜೈಲಿಗೆ? ಬಿಜೆಪಿಗೆ ಸೇರಲು ನಿರಾಕರಿಸಿದವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಎಎಪಿ ನಾಯಕರಾದ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರು ಇವತ್ತು ಬಿಜೆಪಿ ಸೇರಿದರೆ ಸಾಕು ನಾಳೆ ಅವರಿಗೆ ಜಾಮೀನು ಸಿಗುತ್ತದೆ. ನಾನು ಬಿಜೆಪಿ ಸೇರಿದರೆ ಇ.ಡಿಯಿಂದ ನೋಟಿಸ್‌ ಬರುವುದು ನಿಲ್ಲುತ್ತದೆ’ ಎಂದು ಹೇಳಿದರು.

ADVERTISEMENT

ಮೊದಲ ಮೂರು ಸಮನ್ಸ್‌ಗಳಿಗೆ ಪ್ರತಿಕ್ರಿಯೆ ನೀಡದೆ ಇರುವುದಕ್ಕೆ ಕೇಜ್ರಿವಾಲ್ ವಿರುದ್ಧ ಇ.ಡಿ ನ್ಯಾಯಾಲಯದ ಮೊರೆ ಹೋಗಿತ್ತು. ಈ ದೂರಿನ ವಿಚಾರಣೆ ಮಾರ್ಚ್ 16ರಂದು ನಡೆಯಲಿದೆ. ಇದೀಗ ಬುಧವಾರ ಮತ್ತೊಮ್ಮೆ ಇ.ಡಿ ನ್ಯಾಯಾಲಯದ ಮೊರೆ ಹೋಗಿದ್ದು, ವಿಚಾರಣೆಯನ್ನು ಗುರುವಾರ(ಮಾ.8) ನಡೆಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.

ಏತನ್ಮಧ್ಯೆ, ಜಾರಿ ನಿರ್ದೇಶನಾಲಯ ಜಾರಿಗೊಳಿಸಿರುವ ಎಂಟೂ ಸಮನ್ಸ್‌ಗಳು ಕಾನೂನು ಬಾಹಿರ ಎಂದು ಆರೋಪಿಸಿರುವ ಕೇಜ್ರಿವಾಲ್‌, ಮಾರ್ಚ್ 12ರ ನಂತರ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬಹುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.