ADVERTISEMENT

2 ಕೆ.ಜಿ ಇಳಿದ ಕೇಜ್ರಿವಾಲ್ ದೇಹತೂಕ: ತಿಹಾರ್‌ ಜೈಲಿನ ಅಧಿಕಾರಿ

ಪಿಟಿಐ
Published 15 ಜುಲೈ 2024, 14:04 IST
Last Updated 15 ಜುಲೈ 2024, 14:04 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ಜೈಲಿನಲ್ಲಿ ಇರುವ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ದೇಹತೂಕವು 8.5 ಕೆ.ಜಿಯಷ್ಟು ಕಡಿಮೆಯಾಗಿದೆ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ನೀಡಿರುವ ಹೇಳಿಕೆಗೆ ತಿಹಾರ್‌ ಜೈಲಿನ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಅವರ ತೂಕ 2 ಕೆ.ಜಿಯಷ್ಟು ಮಾತ್ರ ಕಡಿಮೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

‘ಎಎಪಿ ನೀಡಿರುವ ಮಾಹಿತಿ ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತದೆ. ಹೀಗಾಗಿ ದೆಹಲಿ ಗೃಹ ಇಲಾಖೆಗೆ ಪತ್ರದ ಮೂಲಕ ಕೇಜ್ರಿವಾಲ್ ಅವರ ದೇಹದ ತೂಕ ಎಷ್ಟು ಕಡಿಮೆಯಾಗಿದೆ ಎಂದು ನಿಖರವಾಗಿ ತಿಳಿಸಿದ್ದೇವೆ’ ಎಂದು ಜೈಲಿನ ಅಧಿಕಾರಿಗಳು ಹೇಳಿರುವುದಾಗಿ ಮೂಲಗಳು ಸೋಮವಾರ ತಿಳಿಸಿವೆ. 

ಏಪ್ರಿಲ್‌ 1ರಂದು ಕೇಜ್ರಿವಾಲ್ ತಿಹಾರ್ ಜೈಲಿಗೆ ಮೊದಲು ಬಂದಾಗ, ಅವರ ದೇಹತೂಕ 65 ಕೆ.ಜಿ. ಇತ್ತು. ಏಪ್ರಿಲ್ 8ರಿಂದ 29ರ ಅವಧಿಯಲ್ಲಿ 66 ಕೆ.ಜಿಯಷ್ಟಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿ,  21 ದಿನಗಳ ನಂತರ ಜೂನ್ 2ರಂದು ಜೈಲಿಗೆ ಮರಳಿದಾಗ ಅವರ ತೂಕ 63.5 ಕೆ.ಜಿ. ಇತ್ತು. ಜುಲೈ 14ರಂದು 61.5 ಕೆ.ಜಿಗೆ ಇಳಿದಿದೆ ಎಂದು ಜೈಲಿನ ಮೂಲಗಳು ಬರೆದಿರುವ ಪತ್ರದಲ್ಲಿ ನಮೂದಿಸಲಾಗಿದೆ ಎಂದು ಹೇಳಿವೆ. 

ADVERTISEMENT

‘ಏಮ್ಸ್‌’ ವೈದ್ಯರ ತಂಡವು ಕೇಜ್ರಿವಾಲ್ ಅವರ ಆರೋಗ್ಯದ ಕುರಿತು ನಿಯಮಿತವಾಗಿ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದೂ ಮೂಲಗಳು ತಿಳಿಸಿವೆ.

ಕೇಜ್ರಿವಾಲ್ ಅವರ ದೇಹದ ತೂಕ ವಿಪರೀತ ಕಡಿಮೆಯಾಗುತ್ತಿದೆ. ಅವರ ರಕ್ತದಲ್ಲಿನ ಸಕ್ಕರೆಯ ಅಂಶದಲ್ಲಿ ಏರಿಕೆ ಆಗುತ್ತಿದ್ದು, ಅವರ ಜೀವಕ್ಕೆ ಅಪಾಯವಿದೆ ಎಂದು ದೆಹಲಿ ಸಚಿವೆ ಆತಿಶಿ ಭಾನುವಾರ ಆರೋಪಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.