ADVERTISEMENT

ಕೇಜ್ರಿವಾಲ್‌ ಆಧುನಿಕ ಸ್ವಾತಂತ್ರ್ಯ ಹೋರಾಟಗಾರ: ಸಚಿವ ಕೈಲಾಶ್‌ ಗೆಹ್ಲೋತ್‌ ಬಣ್ಣನೆ

ಪಿಟಿಐ
Published 15 ಆಗಸ್ಟ್ 2024, 11:12 IST
Last Updated 15 ಆಗಸ್ಟ್ 2024, 11:12 IST
<div class="paragraphs"><p>ಕೈಲಾಶ್‌ ಗೆಹ್ಲೋತ್‌</p></div>

ಕೈಲಾಶ್‌ ಗೆಹ್ಲೋತ್‌

   

ನವದೆಹಲಿ: ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅನುಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಿದ ದೆಹಲಿ ಸರ್ಕಾರದ ಗೃಹ ಸಚಿವ ಕೈಲಾಶ್‌ ಗೆಹ್ಲೋತ್‌, ‘ಕೇಜ್ರಿವಾಲ್‌ ಅವರು ಆಧುನಿಕ ಕಾಲದ ಸ್ವಾತಂತ್ರ್ಯ ಹೋರಾಟಗಾರ’ ಎಂದು ಬಣ್ಣಿಸಿದ್ದಾರೆ. 

ದೆಹಲಿಯ ಮುಖ್ಯಮಂತ್ರಿಗಳು ಜೈಲಿನಲ್ಲಿದ್ದಾರೆ ಎನ್ನುವ ವಿಚಾರ ಬಹಳ ನೋವುಂಟು ಮಾಡಿದೆ ಎಂದ ಅವರು, ‘ಅರವಿಂದ ಕೇಜ್ರಿವಾಲ್‌ ಅವರು ಆಧುನಿಕ ಯುಗದ ಸ್ವಾತಂತ್ರ್ಯ ಹೋರಾಟಗಾರ ಎನ್ನುವುದನ್ನು ಈ ಧ್ವಜದ ಅಡಿಯಲ್ಲಿ ನಿಂತು ಹೆಮ್ಮೆಯಿಂದ ಹೇಳುತ್ತೇನೆ. ಏಕೆಂದರೆ, ದೆಹಲಿ ಜನರಿಗಾಗಿ ಕೆಲಸ ಮಾಡಿ ಅವರು ಜೈಲಿಗೆ ಹೋಗಿದ್ದಾರೆ, ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಆದರೆ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳ ಮುಂದೆ ತಲೆಬಾಗಲಿಲ್ಲ’ ಎಂದು ಹೇಳಿದರು.

ADVERTISEMENT

‘ಚುನಾಯಿತ ಮುಖ್ಯಮಂತ್ರಿಯನ್ನು ಜೈಲಿಗೆ ಹಾಕಲು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ. ಅನಕ್ಷರತೆ, ಬಡತನ, ನಿರುದ್ಯೋಗ, ಕಾಯಿಲೆ ಇವುಗಳ ನಿವಾರಣೆಗೆ ಸ್ವಾತಂತ್ರ್ಯ ಸಿಕ್ಕಿದೆ. ಈ ನ್ಯೂನ್ಯತೆಗಳಿಂದ ದೇಶವನ್ನು ಮುಕ್ತಗೊಳಿಸಲು ಕೇಜ್ರಿವಾಲ್‌ ಶ್ರಮವಹಿಸಿದ್ದಾರೆ. ಅದಕ್ಕಾಗಿಯೇ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ, ಉಚಿತ ವಿದ್ಯುತ್‌ ಮತ್ತು ದೆಹಲಿ ಜನರ ಓಡಾಟಕ್ಕೆ ವಿಶ್ವ ದರ್ಜೆಯ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ’ ಎಂದರು.

ಕೇಜ್ರಿವಾಲ್‌ ಅವರು ಉದ್ದೇಶಿಸಿದಂತೆ ಆಮ್‌ ಆದ್ಮಿ ಪಕ್ಷ ದೆಹಲಿ ಜನರಿಗೆ ಉಚಿತ ವಿದ್ಯುತ್‌. ಶಿಕ್ಷಣ, ಆರೋಗ್ಯ ಸೇವೆ ಮತ್ತು ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ ನೀಡುವುದನ್ನು ಮುಂದುವರಿಸಲಿದೆ ಎಂದು ಗೆಹ್ಲೋತ್‌ ಭರವಸೆ ನೀಡಿದರು.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಪೊಲೀಸರು ಮಾರ್ಚ್‌ 21ರಂದು ಬಂಧಿಸಿದ್ದರು. ಸದ್ಯ ಅವರು ತಿಹಾರ್‌ ಜೈಲಿನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.