ಮುಂಬೈ: ದಶಕದ ಹಿಂದೆ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಗಮನ ಸೆಳೆದಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಅಬಕಾರಿ ನೀತಿ ರೂಪಿಸದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಎಚ್ಚರಿಸಿದ್ದೆ ಎಂದು ಹೇಳಿದ್ದಾರೆ.
2010ರ ಲೋಕಪಾಲ ಚಳವಳಿಯ ಮುಂಚೂಣಿ ನಾಯಕರಾಗಿದ್ದ ಹಜಾರೆ ಜೊತೆ ಅರವಿಂದ ಕೇಜ್ರಿವಾಲ್ ಸಹ ಗುರುತಿಸಿಕೊಂಡಿದ್ದರು.
ಇದೀಗ, ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ) ಬಂಧಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಣ್ಣಾ ಹಜಾರೆ, ಅವರ ಕೃತ್ಯವೇ ಅವರಿಗೆ ಮುಳುವಾಗಿದೆ ಎಂದು ಹೇಳಿದ್ದಾರೆ.
‘ಅಬಕಾರಿ ನೀತಿ ರೂಪಿಸುವುದು ನಮ್ಮ ಕೆಲಸವಲ್ಲ ಎಂದು ಅವರಿಗೆ ಹೇಳಿದ್ದೆ. ಮದ್ಯ ಕೆಟ್ಟದ್ದು ಎಂದು ಚಿಕ್ಕ ಮಕ್ಕಳಿಗೂ ಗೊತ್ತು. ಈ ಅಬಕಾರಿ ನೀತಿ ವಿವಾದದಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದ್ದೆ. ಆದರೂ ಅವರು ನೀತಿ ರೂಪಿಸಿಯೇ ಬಿಟ್ಟರು’ ಎಂದು ಮಹಾರಾಷ್ಟ್ರದ ತಮ್ಮ ಹಳ್ಳಿ ರಾಲೇಗಾಂವ್ ಸಿದ್ಧಿಯಲ್ಲಿ ಅಣ್ಣಾ ಹಜಾರೆ ಹೇಳಿದ್ದಾರೆ.
‘ಅಬಕಾರಿ ನೀತಿಯಿಂದ ಹೆಚ್ಚು ಆದಾಯ ಬರಲಿದೆ ಎಂದು ಕೇಜ್ರಿವಾಲ್ ಭಾವಿಸಿದ್ದರು. ಅದಕ್ಕಾಗಿಯೇ ನೀತಿ ರೂಪಿಸಿದರು. ಅದರಿಂದ ನೊಂದು ಎರಡು ಬಾರಿ ಪತ್ರ ಬರೆದಿದ್ದೆ. ನನ್ನ ಜೊತೆ ಮದ್ಯದ ವಿರುದ್ಧ ಧ್ವನಿ ಎತ್ತಿದ್ದ ವ್ಯಕ್ತಿಯೇ ಅಬಕಾರಿ ನೀತಿ ಮಾಡುತ್ತಿದ್ದಾರೆ ಎಂದು ಬಹಳ ನೋವಾಗಿತ್ತು. ಅವರ ಕೃತ್ಯವೇ ಈಗ ಅವರಿಗೆ ಮುಳುವಾಗಿದೆ. ಅವರು ಏನೂ ತಪ್ಪು ಮಾಡದಿದ್ದರೆ ಬಂಧನದ ಅಗತ್ಯ ಬರುತ್ತಿರಲಿಲ್ಲ.ಈಗ ಕಾನೂನು ಮತ್ತು ಸರ್ಕಾರ ಏನು ಮಾಡಬೇಕೊ ಅದನ್ನು ಮಾಡುತ್ತವೆ’ ಎಂದಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಗುರುವಾರ ರಾತ್ರಿ ಬಂಧನಕ್ಕೊಳಗಾಗಿರುವ ಕೇಜ್ರಿವಾಲ್, ಕೇಂದ್ರ ದೆಹಲಿಯ ಇ.ಡಿ ಕಚೇರಿಯಲ್ಲೇ ರಾತ್ರಿ ಕಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.