ನವದೆಹಲಿ (ಪಿಟಿಐ): ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹೋಳಿ ಹಬ್ಬದಂದು ದೇಶದ ಒಳಿತಿಗಾಗಿ ದಿನವಿಡೀ ಪೂಜೆ ನಡೆಸಿದ್ದಾರೆ.
‘ಬುಧವಾರ ಬೆಳಿಗ್ಗೆ ರಾಜ್‌ಘಾಟ್‌ಗೆ ಭೇಟಿ ನೀಡಿದ್ದ ಕೇಜ್ರಿವಾಲ್ ಅವರು ಮಹಾತ್ಮ ಗಾಂಧೀಜಿಯವರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಬಳಿಕ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ನಿರಂತರವಾಗಿ ಧ್ಯಾನ ನಡೆಸಿದ್ದಾರೆ’ ಎಂದು ಆಮ್ ಆದ್ಮಿ ಪಕ್ಷವು ಟ್ವೀಟ್ ಮಾಡಿದೆ.
‘ದೆಹಲಿಯಲ್ಲಿ ಶಾಲೆ ಹಾಗೂ ಆಸ್ಪತ್ರೆ ನಿರ್ಮಾಣ ಮಾಡಿದ್ದವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜೈಲಿಗೆ ಕಳುಹಿಸಿದ್ದಾರೆ. ಕೋಟ್ಯಂತರ ಮೊತ್ತ ಲೂಟಿ ಹೊಡೆದವರನ್ನು ಅವರು ಅಪ್ಪಿಕೊಳ್ಳುತ್ತಿದ್ದಾರೆ’ ಎಂದು ಎಎಪಿ ದೂರಿದೆ.
‘ಒಳ್ಳೆಯ ಕೆಲಸ ಮಾಡುತ್ತಿರುವವರನ್ನು ಜೈಲಿಗಟ್ಟಲಾಗುತ್ತಿದೆ. ದೇಶವನ್ನು ಲೂಟಿ ಹೊಡೆಯುತ್ತಿರುವವರು ಆರಾಮವಾಗಿದ್ದಾರೆ. ದೇಶದಲ್ಲಿನ ಈ ಪರಿಸ್ಥಿತಿಯು ಕಳವಳಕಾರಿಯಾಗಿದೆ. ಹೀಗಾಗಿ ಹೋಳಿಯ ದಿನ ದೇಶದ ಒಳಿತಿಗಾಗಿ ಪೂಜೆ ಕೈಗೊಳ್ಳಲಿದ್ದೇನೆ’ ಎಂದು ಕೇಜ್ರಿವಾಲ್ ಮಂಗಳವಾರ ಹೇಳಿದ್ದರು.
‘ಕಳೆದ 65 ವರ್ಷಗಳಿಂದ ದೆಹಲಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ವಲಯವು ಕಡೆಗಣನೆಗೆ ಒಳಗಾಗಿತ್ತು. ಮನೀಷ್ ಸಿಸೋಡಿಯಾ ಹಾಗೂ ಸತ್ಯೇಂದರ್ ಜೈನ್ ಅವರು ಕಠಿಣ ಪರಿಶ್ರಮದ ಮೂಲಕ ಪರಿಸ್ಥಿತಿಯನ್ನು ಬದಲಾಯಿಸಿದ್ದರು. ಬಡವರಿಗೆ ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಸೇವೆ ದೊರೆಯುವಂತೆ ಮಾಡಿದ್ದರು. ಆದರೆ ಪ್ರಧಾನಿ ಮೋದಿ ಅವರು ಇವರನ್ನೇ ಜೈಲಿಗೆ ಕಳುಹಿಸಿದ್ದಾರೆ’ ಎಂದು ಅವರು ದೂರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.