ADVERTISEMENT

RSS ಮುಖ್ಯಸ್ಥ ಮೋಹನ್ ಭಾಗವತ್‌ಗೆ ಐದು ಪ್ರಶ್ನೆ ಕೇಳಿದ ಕೇಜ್ರಿವಾಲ್‌

ಪಿಟಿಐ
Published 22 ಸೆಪ್ಟೆಂಬರ್ 2024, 11:17 IST
Last Updated 22 ಸೆಪ್ಟೆಂಬರ್ 2024, 11:17 IST
<div class="paragraphs"><p>ಮೋಹನ್ ಭಾಗವತ್ ಮತ್ತು ಅರವಿಂದ್ಕೇ</p></div>

ಮೋಹನ್ ಭಾಗವತ್ ಮತ್ತು ಅರವಿಂದ್ಕೇ

   

ಪಿಟಿಐ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗಳಿಗೆ ಉತ್ತರಿಸುವಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬಿಜೆಪಿಯ ಮಾತೃ ಸಂಸ್ಥೆ ಆರ್‌ಎಸ್‌ಎಸ್‌ಗೆ ಒತ್ತಾಯಿಸಿದ್ದಾರೆ.

ADVERTISEMENT

ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಜಂತರ್ ಮಂತರ್‌ನಲ್ಲಿ ಮೊದಲ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಐದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

‘ಮಗ ಈಗ ತನ್ನ ತಾಯಿಗೇ ಅಹಂ ತೋರುವಷ್ಟು ದೊಡ್ಡವನಾ?’ ಎಂದು ಮೊದಲ ಪ್ರಶ್ನೆ ಎತ್ತಿರುವ ಅವರು, ಆರ್‌ಎಸ್‌ಎಸ್‌(ತಾಯಿ) ಮಾತಿಗೆ ಮೋದಿ(ಮಗ) ಅವರು ಕಿಮ್ಮತ್ತು ನೀಡುತ್ತಿಲ್ಲವೇ ಎಂದು ಪರೋಕ್ಷವಾಗಿ ಕೇಳಿದ್ದಾರೆ.

‘ಎಲ್‌.ಕೆ.ಅಡ್ವಾಣಿಯವರಂತೆ ಬಿಜೆಪಿಯ ನಿವೃತ್ತಿ ವಯಸ್ಸಿನ ನಿಯಮವು ಮೋದಿಗೆ ಅನ್ವಯಿಸುತ್ತದೆಯೇ’ ಎಂದು ಪ್ರಶ್ನಿಸಿರುವ ಕೇಜ್ರಿವಾಲ್, ರಾಜಕಾರಣಿಗಳನ್ನು ‘ಭ್ರಷ್ಟರು’ ಎಂದು ಕರೆದು ನಂತರ ಅವರನ್ನೆ ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಬಿಜೆಪಿಯ ರಾಜಕೀಯವನ್ನು ನೀವು ಒಪ್ಪುತ್ತೀರಾ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

‘ಆರ್‌ಎಸ್‌ಎಸ್ ಬಿಜೆಪಿಗೆ ಅಗತ್ಯವಿಲ್ಲ’ ಎಂದು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಹೇಳಿದಾಗ ನಿಮಗೆ ಏನನ್ನಿಸಿತು? ಎಂದು ಕೇಳಿರುವ ಅವರು, ಬಿಜೆಪಿಯ ಪ್ರಸ್ತುತ ರಾಜಕಾರಣ ನಿಮಗೆ ತೃಪ್ತಿ ತಂದಿದೆಯೇ? ಎಂದು ಭಾಗವತ್ ಅವರಿಂದ ಉತ್ತರವನ್ನು ನಿರೀಕ್ಷಿಸಿದ್ದಾರೆ.

‘ಚುನಾವಣೆಯಲ್ಲ ಅಗ್ನಿಪರೀಕ್ಷೆ’

‘ಮುಂದೆ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯು ನನಗೆ ಅಗ್ನಿ ಪರೀಕ್ಷೆಯಾಗಿದೆ’ ಎಂದು ಹೇಳಿರುವ ಕೇಜ್ರಿವಾಲ್, ಅಪ್ರಾಮಾಣಿಕ ಎಂದು ಭಾವಿಸಿದರೆ ನನಗೆ ಮತ ಹಾಕಬೇಡಿ ಎಂದು ಜನರಿಗೆ ಮನವಿ ಮಾಡಿದರು.

‘ಭ್ರಷ್ಟಾಚಾರ ಆರೋಪಗಳಿಂದ ಮನನೊಂದು ರಾಜೀನಾಮೆ ನೀಡಿದ್ದೇನೆ. ಕಳೆದ 10 ವರ್ಷಗಳಲ್ಲಿ ಗೌರವವನ್ನು ಸಂಪಾದಿಸಿದ್ದೇನೆ ಹೊರತು ಹಣವನ್ನಲ್ಲ’ ಎಂದು ಇದೇ ವೇಳೇ ಹೇಳಿದರು.   

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ತಿಂಗಳ ಜೈಲುವಾಸ ಅನುಭವಿಸಿದ್ದ ಕೇಜ್ರಿವಾಲ್, ಸೆಪ್ಟೆಂಬರ್ 13 ರಂದು ಜಾಮೀನು ಪಡೆದು ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದರು. ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.