ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಬಂಧನವಾಗುವ ಕೆಲವು ತಿಂಗಳುಗಳ ಮೊದಲೇ ಇನ್ಸುಲಿನ್ ತೆಗೆದುಕೊಳ್ಳುವುದನ್ನು ಬಿಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಜ್ರಿವಾಲ್ ಅವರು ಈಗ ಮಧುಮೇಹಿಗಳು ತೆಗೆದುಕೊಳ್ಳುವ ಸಾಮಾನ್ಯವಾದ ಔಷಧವನ್ನು ಮಾತ್ರ ಸೇವಿಸುತ್ತಿದ್ದಾರೆ ಎಂದು ಅವರು ತಿಹಾರ್ ಜೈಲಿನ ಅಧಿಕಾರಿಗಳು ದೆಹಲಿ ಲಿಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರಿಗೆ ರವಾನಿಸಿರುವ ವರದಿಯೊಂದನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಎಪಿ ನಾಯಕಿ ಆತಿಶಿ, ಈ ವರದಿಯು ಬಿಜೆಪಿಯ ಪಿತೂರಿಯನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ. ‘ಬಿಜೆಪಿಯ ಚಿತಾವಣೆಯಿಂದ, ಕೇಜ್ರಿವಾಲ್ ಅವರನ್ನು ಜೈಲಿನಲ್ಲಿಯೇ ಕೊಲ್ಲಲು ಪಿತೂರಿಯೊಂದು ನಡೆದಿದೆ. ಮುಖ್ಯಮಂತ್ರಿಯವರು 12 ವರ್ಷಗಳಿಂದ ಇನ್ಸುಲಿನ್ ಪಡೆಯುತ್ತಿದ್ದಾರೆ. ಅವರಿಗೆ ಇನ್ಸುಲಿನ್ ನೀಡಲು ತಿಹಾರ್ ಜೈಲಿನ ಅಧಿಕಾರಿಗಳಿಗೆ ಏನು ಸಮಸ್ಯೆ’ ಎಂದು ಆತಿಶಿ ಪ್ರಶ್ನಿಸಿದ್ದಾರೆ.
ಜೈಲಿಗೆ ಹೋಗುವ ಮೊದಲು ಕೇಜ್ರಿವಾಲ್ ಅವರು ಪ್ರತಿದಿನ 50 ಯೂನಿಟ್ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಮಧುಮೇಹಕ್ಕಾಗಿ ತೆಲಂಗಾಣ ಮೂಲದ ವೈದ್ಯರೊಬ್ಬರಿಂದ ಚಿಕಿತ್ಸೆ ಪಡೆಯುತ್ತಿರುವ ಕೇಜ್ರಿವಾಲ್ ಅವರು ಕೆಲವು ತಿಂಗಳುಗಳ ಹಿಂದೆಯೇ ಇನ್ಸುಲಿನ್ ಪಡೆಯುವುದನ್ನು ನಿಲ್ಲಿಸಿದ್ದರು. ಬಂಧನದ ಸಂದರ್ಭದಲ್ಲಿ ಅವರು ಮಧುಮೇಹ ನಿಯಂತ್ರಣಕ್ಕೆ ಮೆಟ್‌ಫಾರ್ಮಿನ್ ಹೆಸರಿನ ಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂದು ತಿಹಾರ್ ಅಧಿಕಾರಿಗಳ ವರದಿ ಉಲ್ಲೇಖಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಿಹಾರ್ ಜೈಲಿನಲ್ಲಿ ವೈದ್ಯಕೀಯ ತಪಾಸಣೆಯ ಸಂದರ್ಭದಲ್ಲಿ ಕೇಜ್ರಿವಾಲ್ ಅವರು ತಾವು ಕೆಲವು ವರ್ಷಗಳಿಂದ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದುದಾಗಿ, ಅದನ್ನು ಕೆಲವು ತಿಂಗಳುಗಳ ಹಿಂದೆ ನಿಲ್ಲಿಸಿರುವುದಾಗಿ ಹೇಳಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ದಾಖಲೆಗಳ ಪ್ರಕಾರ ಕೇಜ್ರಿವಾಲ್ ಅವರಿಗೆ ಇನ್ಸುಲಿನ್ ಪಡೆಯುವಂತೆ ಯಾವುದೇ ಸಲಹೆ ಇರಲಿಲ್ಲ, ಇನ್ಸುಲಿನ್ ಅಗತ್ಯ ಎಂಬುದನ್ನು ಸೂಚಿಸಿರಲೂ ಇಲ್ಲ ಎಂದು ತಿಹಾರ್ ಜೈಲು ಅಧಿಕಾರಿಗಳ ವರದಿಯಲ್ಲಿ ಹೇಳಲಾಗಿದೆ. ಕೇಜ್ರಿವಾಲ್ ಅವರಿಗೆ ಇನ್ಸುಲಿನ್ ನಿರಾಕರಿಸಲಾಗಿದೆ ಎಂದು ಹೇಳುವುದು ತಪ್ಪು ಎಂದು ಕೂಡ ಆ ವರದಿಯು ಹೇಳಿದೆ.
ಕೇಜ್ರಿವಾಲ್ ಅವರ ತಪಾಸಣೆ ನಡೆಸಿದ ತಜ್ಞರು, ‘ಕೇಜ್ರಿವಾಲ್ ಅವರ ದೇಹದಲ್ಲಿನ ಸಕ್ಕರೆಯ ಪ್ರಮಾಣವು ಗಂಭೀರ ಮಟ್ಟದಲ್ಲಿ ಇಲ್ಲ, ಇನ್ಸುಲಿನ್ ಕೊಡುವ ಅಗತ್ಯ ಈಗ ಇಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.